ಮಂಗಳೂರು ಡ್ರಗ್‌ ಪ್ರಕರಣಕ್ಕೆ ಟ್ವಿಸ್ಟ್‌ : ಆಧಾರ ರಹಿತ ಬಂಧನ ಎಂಬ ಆರೋಪ

ವಕೀಲ, ವಿಧಿ ವಿಜ್ಞಾನ ತಜ್ಞರಿಂದ ವೈದ್ಯರನ್ನು ಬಂಧಿಸಿರುವುದಕ್ಕೆ ತೀವ್ರ ಆಕ್ಷೇಪ

ಮಂಗಳೂರು: ಮಾದಕ ದ್ರವ್ಯ ಸೇವನೆ ಮತ್ತು ಸಾಗಾಟ ಪ್ರಕರಣದಲ್ಲಿ ಮಂಗಳೂರಿನಲ್ಲಿ ಇತ್ತೀಚಿಗೆ ಹಲವು ವೈದ್ಯರು ಮತ್ತು ವಿದ್ಯಾರ್ಥಿಗಳನ್ನು ಬಂಧಿಸಿದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅವೈಜ್ಞಾನಿಕ ಹಾಗೂ ಆಧಾರರಹಿತವಾಗಿ ತನಿಖೆ ನಡೆಸಲಾಗಿದೆ ಎಂದು ವಿಧಿ ವಿಜ್ಞಾನ ತಜ್ಞ ಡಾ. ಮಹಾಬಲ ಶೆಟ್ಟಿ ಆರೋಪಿಸಿದ್ದಾರೆ. ಹಿರಿಯ ವಕೀಲ ಮನೋರಾಜ್ ರಾಜೀವ ಹೈಕೋರ್ಟ್ ಮಧ್ಯ ಪ್ರವೇಶಿಸಿ ಸಿಬಿಐ ಅಥವಾ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಮನವಿ ಮಾಡಿದ್ದಾರೆ. ಇಲ್ಲವಾದರೆ ತಾವು ಮನವಿ ಮಾಡಿರುವಂತೆ ಪ್ರಕರಣದ ತನಿಖೆಯಲ್ಲಿ ಮೇಲ್ವಿಚಾರಣೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
ಮಾದಕದ್ರವ್ಯ ವ್ಯಸನಿಗಳನ್ನು ಡ್ರಗ್ ಪೆಡ್ಲರ್‌ಗಳೆಂದು ಪರಿಗಣಿಸಲು ಲಭ್ಯವಿರುವ ಸಾಕ್ಷಿಗಳ ಬಗ್ಗೆ ಗಂಭೀರವಾದ ಅನುಮಾನವಿದೆ. ಮೇಲ್ನೋಟಕ್ಕೆ ಸಾಕಷ್ಟು ಸಾಕ್ಷಿ ಆಧಾರಗಳಿಲ್ಲ ಅನ್ನಿಸುತ್ತಿದ್ದು, ತನಿಖೆ ಕಳಪೆ, ಅವೈಜ್ಞಾನಿಕ ಮತ್ತು ಕಾನೂನು ಆಧಾರರಹಿತವಾಗಿದೆ ಎಂದು ಎಂದು ಶೆಟ್ಟಿ ಮತ್ತು ರಾಜೀವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆದುಕೊಂಡ ರೀತಿ ಎನ್‌ಡಿಪಿಎಸ್ ಕಾಯಿದೆಗೆ ಅನುಗುಣವಾಗಿಲ್ಲ ಮತ್ತು ಅವರು ನ್ಯಾಯಯುತವಾಗಿ ನಡೆದುಕೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಪ್ರಮುಖ ಆರೋಪಿಯನ್ನು ಹೊರತುಪಡಿಸಿ ವಿದ್ಯಾರ್ಥಿಗಳು ಮತ್ತು ವೈದ್ಯರ ಬಳಿ ಯಾವುದೇ ಗಾಂಜಾ ಪತ್ತೆಯಾಗಿಲ್ಲ. ಅಂತಹ ಸಂದರ್ಭಗಳಲ್ಲಿ ಪೊಲೀಸರು ದೃಢೀಕರಣಕ್ಕಾಗಿ ಸಿಎಫ್‌ಎಸ್‌ಎಲ್, ಎಫ್‌ಎಸ್‌ಎಲ್ ಅಥವಾ ಆರ್‌ಎಫ್‌ಎಸ್‌ಎಲ್ ಪರೀಕ್ಷೆ ನಡೆಸಬೇಕು. ಆದರೆ ಅವರು ಕೇವಲ ವಿಶ್ವಾಸಾರ್ಹವಲ್ಲದ ತಪಾಸಣೆ ಆಧಾರದ ಮೇಲೆ ವೈದ್ಯಾರನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಎನ್‌ಡಿಪಿಎಸ್ ಕಾಯ್ದೆಯ ಪ್ರಕಾರ, ಸ್ಕ್ರೀನಿಂಗ್ ಪರೀಕ್ಷೆಯು ಪಾಸಿಟಿವ್ ಆದ ಒಂದು ಗಂಟೆಯೊಳಗೆ ದೃಢೀಕರಣ ಪರೀಕ್ಷೆಯನ್ನು ಮಾಡಬೇಕು ಮತ್ತು ಎರಡನೇ ಪರೀಕ್ಷೆ ಪಾಸಿಟಿವ್ ಆಗಿದ್ದರೆ ಮಾತ್ರ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಜೈಲಿಗೆ ಕಳುಹಿಸಬಹುದು. ಈ ಪ್ರಕರಣದಲ್ಲಿ ಒಂದು ನಿರ್ದಿಷ್ಟ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಪ್ರತಿಕಾರದಿಂದ ವರ್ತಿಸಿದಂತೆ ತೋರುತ್ತಿದೆ ಎಂದು ಆರೋಪಿಸಿದ್ದಾರೆ.
ಆರೋಪಿ ವೈದ್ಯರ ಫೋಟೊಗಳನ್ನು ಪೊಲೀಸರು ಏಕೆ ಬಹಿರಂಗಪಡಿಸಿದರು, ಅದೇ ರೀತಿಯ ಪ್ರಕರಣಗಳಲ್ಲಿ ದಾಖಲಾಗಿರುವ ಇತರರಿಗೆ ಆ ರೀತಿ ಏಕೆ ಮಾಡಿಲ್ಲ? ಇದು ಮಾದಕದ್ರವ್ಯ ವ್ಯಸನಿಗಳು ಮತ್ತು ಅವರ ಪೋಷಕರು ಮತ್ತು ಅವರ ಹತ್ತಿರದ ಮತ್ತು ಆತ್ಮೀಯ ಸಂಬಂಧಿಕರಿಗೆ ಆಘಾತವನ್ನು ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ.
ಪೊಲೀಸರು ವಿದ್ಯಾರ್ಥಿಗಳನ್ನು ಬಂಧಿಸಿ ಅವರ ಭವಿಷ್ಯವನ್ನು ಹಾಳು ಮಾಡಿದ್ದಾರೆ. ಈ ಬೆಳವಣಿಗೆಯಿಂದ ಮಂಗಳೂರು ನಗರಕ್ಕೆ ತೀವ್ರ ಹಿನ್ನಡೆಯಾಗಿದೆ . ಮಂಗಳೂರು ಶೈಕ್ಷಣಿಕ ಕೇಂದ್ರ ಎಂಬ ಇಮೇಜ್ ಹಾಳಾಗಿದ್ದು, ಗಂಭೀರ ಆರ್ಥಿಕ ಪರಿಣಾಮ ಉಂಟು ಮಾಡಬಹುದಾದರೂ ಜಿಲ್ಲೆಯ ಸಂಸದರು ಮತ್ತು ಶಾಸಕರು ಈ ವಿಷಯದಲ್ಲಿ ಏಕೆ ಮಧ್ಯ ಪ್ರವೇಶಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

Latest Articles

error: Content is protected !!