
ಹಾಸನ : ಹಾಸನದಲ್ಲಿ ಬಿಜೆಪಿ ನಾಯಕರೊಬ್ಬರು ಪಕ್ಷದ ಕಾರ್ಯಕರ್ತನನ್ನೆ ಅಟ್ಟಾಡಿಸಿ ಥಳಿಸಿದ ಘಟನೆ ಅರಸೀಕೆರೆಯಲ್ಲಿ ಜ. 25ರಂದು ನಡೆದಿದೆ. ಬಿಜೆಪಿಯ ಬೂತ್ ವಿಜಯ್ ಅಭಿಯಾನ ಕಾರ್ಯಕಮದಲ್ಲಿ ತಮಗೆ ಅವಮಾನ ಮಾಡಿದ್ದಾನೆಂದು ವಿಜಯ್ ಕುಮಾರ್ ಎಂಬಾತ ತನ್ನ ಕಾರು ಚಾಲಕನ ಜೊತೆ ಸೇರಿಕೊಂಡು ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಕಳೆದ ವರ್ಷ ಬಿಜೆಪಿ ಸಮಾವೇಶದ ವೇಳೆ ಅರಸೀಕೆರೆ ಬಿಜೆಪಿ ಟಿಕೇಟ್ ಆಕಾಂಕ್ಷಿ ಎನ್.ಆರ್. ಸಂತೋಷ್ ಹಾಗೂ ವಿಜಯ್ ಕುಮಾರ್ ಬಣದ ನಡುವೆ ಗಲಾಟೆಯಾಗಿತ್ತು. ಕುಮಾರ್, ಎನ್.ಆರ್. ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೇ ಇತ್ತೀಚೆಗೆ ಬಿಜೆಪಿಯ ಬೂತ್ ವಿಜಯ್ ಅಭಿಯಾನದಲ್ಲಿ ವಿಜಯ್ ಕುಮಾರ್ಗೆ ಅವಮಾನವಾಗಿತ್ತು. ಆ ಘಟನೆ ವೀಡಿಯೋ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಎನ್ನಲಾಗುತ್ತಿದ್ದು ಇದೇ ಕಾರಣಕ್ಕಾಗಿ ಇಂದು ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಅರಸೀಕೆರೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಾಳು ಕುಮಾರ್ ನನ್ನು ಅರಸೀಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.