ಕುಖ್ಯಾತ ಕಳ್ಳರ ಬಂಧನ : 19 ಲಕ್ಷ ರೂ. ಸೊತ್ತು ವಶ

0

ಓರ್ವ ಆರೋಪಿ ಈದು ಗ್ರಾಮದ ಹೊಸ್ಮಾರಿನವ

ಬ್ರಹ್ಮಾವರ : ಕೋಟ ಠಾಣೆ ವ್ಯಾಪ್ತಿಯ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ಮಠದ ತೋಟ ಸಾಸ್ತಾನ ಎಂಬಲ್ಲಿರುವ ಬೆಂಗಳೂರಿನ ಹೋಟೆಲ್ ಉದ್ಯಮಿ ರಾಜೇಶ್‌ ಪೂಜಾರಿ ಎಂಬವರ ಮನೆಯಲ್ಲಿ ಕಳೆದ ಸೆಪ್ಟಂಬರ್‌ನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ರಾತ್ರಿ ಕಳ್ಳರು ಮನೆಯ ಬಾಗಿಲು ಒಡೆದು ನುಗ್ಗಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೋಟ ಠಾಣಾ ಪಿ.ಎಸ್.ಐ ಮಧು ಬಿ.ಇ., ಪ್ರೋಬೇಷನರಿ ಪಿ.ಎಸ್.ಐ ನೂತನ್ ಡಿ.ಇ, ಸಿಬ್ಬಂದಿ ಪ್ರದೀಪ ನಾಯಕ್, ರಾಘವೇಂದ್ರ, ಪ್ರಸನ್ನ ಬ್ರಹ್ಮಾವರ ಠಾಣಾ ಸಿಬ್ಬಂದಿ ವೆಂಕಟರಮಣ ದೇವಾಡಿಗ ಅವರನ್ನೊಳಗೊಂಡ ತಂಡ ಹಳೆ ಅಪರಾಧಿಗಳು, ಮನೆ ಕಳ್ಳತನ ಪ್ರಕರಣದ ಆರೋಪಿಗಳು, ಜೈಲಿನಿಂದ ಬಿಡುಗಡೆಯಾದವರ ಮಾಹಿತಿಯನ್ನು ಕಲೆಹಾಕಿ ಅವರ ಚಲನವಲನ ಮೇಲೆ ನಿಗಾ ಇರಿಸಿ, ತಾಂತ್ರಿಕ ಮಾಹಿತಿ ಹಾಗೂ ಸಿಸಿ ಕ್ಯಾಮೇರಾ ಪರಿಶೀಲನೆ ನಡೆಸಿ ಸಂಶಯಾಸ್ಪದ ಆರೋಪಿಗಳ ಮೇಲೆ ನಿಗಾವಹಿಸಿತ್ತು.
ಕಳೆದ ಭಾನುವಾರ ಕೋಟ ಠಾಣೆ ಸರಹದ್ದಿನ ಸಾಯಬರಕಟ್ಟೆ ಬಳಿ ಖಚಿತ ಮಾಹಿತಿಯಂತೆ ವಿಶೇಷ ತಂಡ ವಾಹನ ತಪಾಸಣೆ ನಡೆಸುವ ಸಮಯದಲ್ಲಿ ಬಂದ ಪೋರ್ಡ್‌ ಮಾಂಡಿಯೋ ಕಾರನ್ನು ಪರಿಶೀಲಿಸಿದಾಗ ರಾಜೇಶ ದೇವಾಡಿಗ ಮತ್ತು ಮೊಹಮ್ಮದ್‌‌‌‌ ರಿಯಾಜ್‌‌‌‌‌‌‌ ಹೊಸ್ಮಾರ್‌‌‌‌ ಎಂಬುವವರಿದ್ದು ಕಾರನ್ನು ಪರಿಶೀಲನೆ ನಡೆಸಿದಾಗ ಅವರ ಬಳಿ ಯಾವುದೇ ದಾಖಲೆಯಿಲ್ಲದ ಚಿನ್ನಾಭರಣಗಳು ಇರುವುದು ಪತ್ತೆಯಾಯಿತು. ಈ ಬಗ್ಗೆ ವಿಚಾರಿಸಿದಾಗ ಸಾಸ್ತಾನದ ಚರ್ಚ್‌ ಬಳಿಯಿರುವ ಮನೆಯಿಂದ ಕಳವು ಮಾಡಿದ ಚಿನ್ನಾಭರಣವಾಗಿದ್ದು, ಅವುಗಳನ್ನು ಮಾರಾಟ ಮಾಡಲು ಶಿವಮೊಗ್ಗ ಕಡೆಗೆ ಹೋಗುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
ಕಾಪು ತಾಲೂಕಿನ ಎಲ್ಲೂರು ಗ್ರಾಮದ ಮಂಜೆಬೆಟ್ಟುವಿನ ರಾಜೇಶ್‌‌‌‌‌ ದೇವಾಡಿಗ (38) ಹಳೆ ಅಪರಾಧಿಯಾಗಿದ್ದು ಜೈಲುವಾಸ ಅನುಭವಿಸಿ ಬಿಡುಗಡೆಗೊಂಡಿದ್ದ. ಈಗಾಗಲೇ ಈತನ ಮೇಲೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 12 ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.
ಕಾರ್ಕಳ ತಾಲೂಕಿನ ಈದು ಗ್ರಾಮದ ಹೊಸ್ಮಾರಿನ ರಿಯಾನ ಮಂಜಿಲ್‌‌‌‌ ಮೊಹಮ್ಮದ್‌‌‌‌ ರಿಯಾಜ್‌‌‌‌‌‌‌ ಹೊಸ್ಮಾರ್‌‌‌‌ ಅಲಿಯಾಸ್‌ ರಿಯಾಜ್‌ (39) 2018ರಲ್ಲಿ ಕಾರ್ಕಳದ ಪ್ಲೋರಿನ್ ಮಚಾದೋ ಎಂಬವರ ಕೊಲೆ ಹಾಗೂ ಸುಲಿಗೆ ಪ್ರಕರಣ ಹಾಗೂ 2021ರಲ್ಲಿ ಕಾಸರಗೊಡು ಜಿಲ್ಲೆಯ ಮಂಜೇಶ್ವರದ ರಾಜಧಾನಿ ಜ್ಯುವೆಲರ್ಸ್‌ ದರೋಡೆ ಪ್ರಕರಣದ ಆರೋಪಿ.
ಈ ಇಬ್ಬರು ಆರೋಪಿಗಳು ಹಿರಿಯಡ್ಕ ಜೈಲಿನಲ್ಲಿರುವಾಗ ಪರಿಚಯವಾಗಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರಾತ್ರಿ ಹೊತ್ತು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ನಡೆಸಲು ಸಂಚು ನಡೆಸುತ್ತಿದ್ದರು.
ಆರೋಪಿಗಳಿಂದ ಕಳ್ಳತನ ನಡೆಸಿದ ಸುಮಾರು 15 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ಕಳ್ಳತನ ಮಾಡಿದ ಹಣದಿಂದ ಖರೀದಿಸಿದ ಸುಮಾರು 2 ಲಕ್ಷ 50 ಸಾವಿರ ರೂ. ಮೌಲ್ಯದ ಪೋರ್ಡ್‌ ಮಾಂಡಿಯೋ ಕಾರು, ಸುಮಾರು 1 ಲಕ್ಷ ರೂ. ಮೌಲ್ಯದ ಹೋಂಡಾ ಡೆಸ್ಟಿನಿ ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 50 ಸಾವಿರ ರೂ. ಮೌಲ್ಯದ ಹೋಂಡಾ ಆ್ಯಕ್ಟಿವಾ ಸ್ಕೂಟಿಯನ್ನು ವಶಪಡಿಸಲಾಗಿದೆ. ಸ್ವಾಧೀನ ಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 19 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ. ಎ.ಚ್ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ, ಉಪಾಧೀಕ್ಷಕ ದಿನಕರ ಪಿ.ಕೆ. ಪೊಲೀಸ್, ನಿರ್ದೇಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಪ್ರಕರಣವನ್ನು ಭೇದಿಸಿದ ಪೊಲೀಸ್‌ ತಂಡವನ್ನು ಅಧೀಕ್ಷಕ ಅಕ್ಷಯ ಎಂ. ಎಚ್. ಅಭಿನಂದಿಸಿದ್ದಾರೆ.

Previous articleಗಾಂಧಿ- ಗೋಡ್ಸೆ ಏಕ್‌ ಯುದ್ಧ್‌ ಸಿನೆಮಾಕ್ಕೆ ಭಾರಿ ವಿರೋಧ
Next articleಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ : 7 ಸಾವು

LEAVE A REPLY

Please enter your comment!
Please enter your name here