ಜಗತ್ತಿನ ಪ್ರತೀ ಒಂದು ಹೆಣ್ಣು ಮಗುವಿನಲ್ಲಿ ಕೂಡ ಸ್ವಂತ ಮಗಳನ್ನು ಕಾಣುವ ಹೃದಯ ವೈಶಾಲ್ಯತೆ ಹೊಂದಿರುವ ಎಲ್ಲರಿಗೆ ಈ ದಿನ ಒಂದು ಅದ್ಭುತವಾದ ದಿನ!
ಪ್ರತಿಯೊಂದು ಹೆಣ್ಣು ಮಗುವಿನಲ್ಲಿ ಕೂಡ ಒಬ್ಬಳು ಪುಟ್ಟ ದೇವತೆಯು ಇರುತ್ತಾಳೆ. ಆಕೆ ಒಂದು ಅದ್ಭುತ ಕಲ್ಪನೆ ಮತ್ತು ಫ್ಯಾಂಟಸಿ ಆಗಿರುತ್ತಾಳೆ. ಆಕೆಯ ಒಳಗೆ ಒಬ್ಬಳು ಅದ್ಭುತ ಗೆಳತಿ, ಅಕ್ಕ, ತಾಯಿ…. ಎಲ್ಲರೂ ಇರುತ್ತಾರೆ.
ಅಪ್ಪನ ಎದೆಗೊರಗಿ ಜಗತ್ತನ್ನೇ ಮರೆಯುವ ಮಗಳು, ಅಪ್ಪ ನಾನು ನಿನ್ನನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ ಅಂತ ಪ್ರೀತಿ ಸುರಿಯುವ ಮಗಳು, ಅಪ್ಪನ ಭುಜದ ಮೇಲೆ ಗಾಢವಾಗಿ ಮಲಗಿ ಕಂಫರ್ಟನೆಸ್ ಫೀಲ್ ಮಾಡುವ ಮಗಳು, ಅವರು ನನ್ನ ಅಪ್ಪ ಕಣೊ! ಎಂದು ಹೆಮ್ಮೆಯಿಂದ ತನ್ನ ಎಲ್ಲ ಗೆಳೆಯ ಮತ್ತು ಗೆಳತಿಯರಿಗೆ ಜಂಬದಿಂದ ಪರಿಚಯಿಸುವ ಪುಟ್ಟ ಮಗಳು, ಎತ್ತರಕ್ಕೆ ಬೆಳೆಯುತ್ತಾ ಹೋದಂತೆ ಅಪ್ಪನಲ್ಲಿ ತನ್ನ ಕನಸಿನ ಹುಡುಗನನ್ನು ಹುಡುಕುವ ಮಗಳು, ನನ್ನ ಪ್ರೀತಿಯ ಅಪ್ಪಾ, ನಿಮ್ಮಿಂದ ನನಗೆ ಇಷ್ಟೊಂದು ಸ್ವಾಭಿಮಾನದ ಬದುಕು ದೊರೆಯಿತು ಎಂದು ಆರ್ದ್ರ ಭಾವವನ್ನು ತುಂಬಿ ಹೇಳುವ ಮಗಳು, ಲವ್ ಯು ಅಪ್ಪ ಎಂದು ಪದೇ ಪದೇ ಗಟ್ಟಿಯಾಗಿ ಹೇಳದಿದ್ದರೂ ತನ್ನ ಬಟ್ಟಲು ಕಣ್ಣಲ್ಲಿ ಬೆಟ್ಟದಷ್ಟು ಪ್ರೀತಿಯನ್ನು ತುಳುಕಿಸುವ ಮಗಳು, ಶಾಲೆಯಲ್ಲಿ ಮೈ ಡಾಡಿ ಮೈ ಪ್ರೈಡ್ ಎಂದು ಭಾಷಣ ಬಿಗಿಯುವ ಮಗಳು, ‘ರೆಕ್ಕೆಯ ಕುದುರೆ ಏರಿ’ ಎಂದು ಅಪ್ಪ ಮಗಳ ಹಾಡನ್ನು ಅಭಿನಯಿಸಿ ವಿಡಿಯೋ ಮಾಡಿ ಸ್ಟೇಟಸ್ ಹಾಕುವ ಮಗಳು, ‘ ಅವರು ನನ್ನ ಅಪ್ಪ ಕಣೋ, ನನಗಾಗಿ ಸರ್ವಸ್ವ ಧಾರೆ ಎರೆದಿದ್ದಾರೆ, ನೀನೂ ಅವರನ್ನು ಪ್ರೀತಿ ಮಾಡಬೇಕು’ ಎಂದು ತನ್ನ ಹುಡುಗನಿಗೆ ಅಪ್ಪಣೆ ಮಾಡುವ ಮಗಳು…..!
ದೊಡ್ಡವಳು ಆದಂತೆ ಅಪ್ಪನಿಗೆ ಅವ್ಯಕ್ತವಾದ ಆತಂಕವನ್ನು ತುಂಬಿಸುವ ತುಂಟ ಮಗಳು, ಮದುವೆಯ ಮಂಟಪದಲ್ಲಿ ಕೂಡ ನಿಮ್ಮಂತಹ ಅಪ್ಪ ಬೇರೆ ಯಾರಿಗೂ ಸಿಗಲು ಸಾಧ್ಯವೆ ಇಲ್ಲ! ಎಂದು ಹೇಳಿ ತನ್ನ ಹುಡುಗನ ಮುಂದೆ ಕೂಡ ಅಪ್ಪನ ಕಣ್ಣೀರನ್ನು ಒರೆಸುವ ಮಗಳು, ಯಾರೇನೇ ಹೇಳಿದರೂ ಅಪ್ಪನ ಪರವಾಗಿಯೇ ನಿಲ್ಲುವ ಪುಟ್ಟ ಮಗಳು, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡಿ ಅಪ್ಪ ಎಂದು ಪದೇ ಪದೇ ನೆನಪಿಸುವ ಮಗಳು, ಯಾವ ಹೊತ್ತಿನಲ್ಲಿ ಯಾವ ಔಷಧಿ ತೆಗೆದುಕೊಳ್ಳಬೇಕು ಎಂದು ಮೊಬೈಲ್ ಅಲಾರಂ ಸೆಟ್ ಮಾಡಿ ಇಡುವ ಮಗಳು…………..!
ಇಂಥಹ ಮಗಳನ್ನು ಪಡೆಯಲು ನಿಜವಾಗಿ ದೇವರ ಕೃಪೆ ಬೇಕು!
ದೇಶದ ಎಲ್ಲ ಪುಟ್ಟ ದೇವತೆಗಳಿಗೆ ಹೆಣ್ಣು ಮಗುವಿನ ದಿನದ ಶುಭಾಶಯಗಳು.

✒️ ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು