ಸರಣಿ ಗೆದ್ದಿರುವುದರಿಂದ ಟೀಮ್ ಇಂಡಿಯಾದಲ್ಲಿ ಕೆಲವು ಬದಲಾವಣೆ ಸಾಧ್ಯತೆ
ಇಂದೋರ್ : ಭಾರತ-ನ್ಯೂಜಿಲೆಂಡ್ ನಡುವಿನ ತೃತೀಯ ತಥಾ ಅಂತಿಮ ಏಕದಿನ ಹಣಾಹಣಿ ಇಂದು ಇಂದೋರಿನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡು ಗೆಲುವುಗಳೊಂದಿಗೆ ಭಾರತ ಈಗಾಗಲೇ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಹೈದರಾಬಾದ್ನಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಇಂಡಿಯಾ 12 ರನ್ಗಳ ಜಯ ಸಾಧಿಸಿತ್ತು. ಬಳಿಕ ರಾಯ್ಪುರದಲ್ಲಿ ಬಿರುಗಾಳಿ ಎಬ್ಬಿಸಿದ ಭಾರತೀಯ ಬೌಲರ್ಗಳು ದ್ವಿತೀಯ ಪಂದ್ಯದಲ್ಲೂ 8 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿದ್ದಾರೆ.
ಇಂದು ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದ್ದು, ರೋಹಿತ್ ಪಡೆ ಈ ಕೊನೆಯ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್ಸ್ವೀಪ್ ಮಾಡುವ ಗುರಿ ಹೊಂದಿದೆ. ಕಿವೀಸ್ ಪಡೆ ಕನಿಷ್ಠ ಒಂದು ಪಂದ್ಯವನ್ನಾದರೂ ಜಯಿಸಿ ಮಾನ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಿದೆ.
ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಕೆಲವು ಪ್ರಮುಖ ಬದಲಾವಣೆ ನಿರೀಕ್ಷಿಸಲಾಗಿದೆ. ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ನಾಯಕ ರೋಹಿತ್ ಶರ್ಮಾ ಕೂಡ ರೆಸ್ಟ್ ಮೊರೆ ಹೋದರೆ ಅಚ್ಚರಿ ಪಡಬೇಕಿಲ್ಲ. ಹೀಗಾಗಿ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಹೊಸ ಮುಖಗಳು ಕಾಣುವುದು ಖಚಿತ.
ಇಂದೋರ್ನಲ್ಲಿ ಟೀಮ್ ಇಂಡಿಯಾ ಒಂದು ವಿಶೇಷ ದಾಖಲೆ ಮಾಡುವ ಅವಕಾಶ ಹೊಂದಿದೆ. ಇದುವರೆಗೆ ಹೋಳ್ಕರ್ ಸ್ಟೇಡಿಯಂನಲ್ಲಿ 5 ಏಕದಿನ ಪಂದ್ಯಗಳು ನಡೆದಿದ್ದು, ಈ ಐದು ಪಂದ್ಯಗಳಲ್ಲಿಯೂ ಟೀಂ ಇಂಡಿಯಾ ಜಯ ಸಾಧಿಸಿದೆ. ಈಗ ನಡೆಯುವ 6ನೇ ಏಕದಿನ ಪಂದ್ಯದಲ್ಲೂ ಗೆಲುವು ಸಾಧಿಸಿದರೆ, ಈ ಮೈದಾನದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನೂ ಗೆದ್ದ ದಾಖಲೆಯನ್ನು ಟೀಮ್ ಇಂಡಿಯಾ ಬರೆಯಲಿದೆ.