ನಿರ್ದೇಶಕರಿಗೆ ಜೀವ ಬೆದರಿಕೆ
ಮುಂಬೈ: ಗಾಂಧಿ- ಗೋಡ್ಸೆ ಏಕ್ ಯುದ್ಧ್ ಸಿನೆಮಾಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದು, ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಅವರಿಗೆ ಕೊಲೆ ಬೆದರಿಕೆ ಕರೆ ಬಂದಿರುವ ಕುರಿತು ಪೊಲೀಸ್ ದೂರು ದಾಖಲಾಗಿದೆ. ಸಂತೋಷಿ ಹೆಚ್ಚುವರಿ ಭದ್ರತೆಗಾಗಿ ಮನವಿ ಮಾಡಿದ್ದಾರೆ.
ಜೀವ ಬೆದರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸುವಂತೆ ವಿಶೇಷ ಪೊಲೀಸ್ ಆಯುಕ್ತ ದೇವನ್ ಭಾರ್ತಿ ಅವರಿಗೆ ಮನವಿ ಸಲ್ಲಿಸಿರುವ ರಾಜ್ ಕುಮಾರ್ ಸಂತೋಷಿ, ಪಟ್ಟಭದ್ರ ಹಿತಾಸಕ್ತಿ ಹೊಂದಿರುವವರ ಗುಂಪೊಂದು ಸುದ್ದಿಗೋಷ್ಠಿಗೂ ಅಡ್ಡಿಪಡಿಸಿರುವುದಾಗಿ ತಿಳಿಸಿದ್ದಾರೆ.
ಚಿತ್ರ ಬಿಡುಗಡೆ ಮಾಡದಂತೆ, ಪ್ರಚಾರವನ್ನು ನಿಲ್ಲಿಸುವಂತೆ ಕೆಲವು ಅಪರಿಚಿತರಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದ್ದು, ಅಸುರಕ್ಷತೆಯ ಭಾವ ಕಾಡುತ್ತಿದೆ. ಅಂತಹ ವ್ಯಕ್ತಿಗಳನ್ನು ಬಿಟ್ಟರೆ ನನಗೆ ಮತ್ತು ನನ್ನ ಕುಟುಂಬ ಸದಸ್ಯರಿಗೆ ತೊಂದರೆಯನ್ನುಂಟು ಮಾಡಬಹುದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಗಾಂಧಿ ಮತ್ತು ನಾಥೂ ರಾಮ್ ಗೋಡ್ಸೆಯ ವೈಚಾರಿಕ ನಿಲುವುಗಳ ಮೇಲೆ ಬೆಳಕು ಚೆಲ್ಲುವ ಸಿನೆಮಾ ಗಾಂಧಿ-ಗೋಡ್ಸೆ ಏಕ್ ಯುದ್ಧ್. ಗುಂಡೇಟು ತಿಂದ ಗಾಂಧಿ ಬದುಕುಳಿದು ಗೋಡ್ಸೆಯನ್ನು ಭೇಟಿ ಮಾಡುವುದು, ಅವರ ನಡುವೆ ನಡೆಯುವ ಸೈದ್ಧಾಂತಿಕ ವಾಗ್ವಾದ ಚಿತ್ರದ ಹೈಲೈಟ್. ಸ್ವಾತಂತ್ರ್ಯ ಹೋರಾಟ, ದೇಶ ವಿಭಜನೆ ಇತ್ಯಾದಿ ವಿಚಾರಗಳು ಚಿತ್ರದಲ್ಲಿ ಬರುತ್ತವೆ. ಗಣರಾಜ್ಯೋತ್ಸವಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಆದರೆ ಈಗಾಗಲೇ ಚಿತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿಯ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿದಂತೆ ಮುಂಬರುವ ಮಹಾತ್ಮಗಾಂಧಿ ಅವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಕುರಿತಾದ ಸಿನಿಮಾವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬ್ಯಾನ್ ಮಾಡಬೇಕು ಎಂದು ಎಐಎಂಇಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಒತ್ತಾಯಿಸಿದ್ದಾರೆ. ಗೋಡ್ಸೆ ಸಿನಿಮಾ ಯಾವುದೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದಂತೆ ಕೇಂದ್ರ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಗೋಡ್ಸೆ ಗಾಂಧಿಯನ್ನು ಕೊಂದ ಹಂತಕ. ಹಾಗಾದರೆ ಸ್ವಾತಂತ್ರ ಭಾರತದಲ್ಲಿ ಅತಿದೊಡ್ಡ ಉಗ್ರ ಯಾರು? ಎಂದು ಪ್ರಶ್ನಿಸಿರುವ ಓವೈಸಿ, ಈಗ ಗೋಡ್ಸೆ ಕುರಿತು ಸಿನೆಮಾ ಮಾಡಲಾಗುತ್ತಿದೆ. ಈ ಸಿನೆಮಾವನ್ನು ಪ್ರಧಾನಿ ಮೋದಿ ಬ್ಯಾನ್ ಮಾಡುತ್ತಾರೆಯೇ ಅಥವಾ ಅದನ್ನು ವೀಕ್ಷಿಸುವಂತೆ ಜನರಿಗೆ ಹೇಳುತ್ತಾರೆಯೇ? ಎಂದು ಕೇಳಿದ್ದಾರೆ.