ಸಚಿವ ಡಾ| ಸುಧಾಕರ್ ಆರೋಪ
ಬೆಂಗಳೂರು : ಬಿಜೆಪಿ ವಿರುದ್ಧ ನಿತ್ಯ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಸಿದ್ದರಾಮಯ್ಯ ವಿರುದ್ಧ ಸಚಿವರು ತಿರುಗಿಬಿದ್ದಿದ್ದಾರೆ. ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸುಮಾರು 35 ಸಾವಿರ ಕೋಟಿ ರೂ. ಹಣಕಾಸು ಅವ್ಯವಹಾರ ಆಗಿರುವ ಬಗ್ಗೆ ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನಮ್ಮ ಸರಕಾರದ ವಿರುದ್ಧ ಸಿದ್ದರಾಮಯ್ಯ ಅವರು ಶೇ.40 ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಅದರ ಸತ್ಯಾಸತ್ಯತೆ ತಿಳಿಸುತ್ತೇನೆ. ಅವರ ಅವಧಿಯಲ್ಲಿ ಡಿನೋಟಿಫಿಕೇಷನ್ಗೆ ರೀಡೂ ಎಂಬ ಪದವನ್ನು ಅನುಕೂಲಸಿಂಧುವಾಗಿ ಬಳಸಲಾಗಿದೆ. ಬೆಂಗಳೂರಿನ ಹತ್ತು ಸಾವಿರ ಕುಟುಂಬಗಳಿಗೆ ಇದರಿಂದ ಅನ್ಯಾಯವಾಗಿದೆ. 900 ಎಕರೆಗೂ ಹೆಚ್ಚು ಜಾಗವನ್ನು ಡಿನೋಟಿಫಿಕೇಷನ್ ಮಾಡಿದ್ದರು. ಇದೆಲ್ಲವನ್ನೂ ಮುಚ್ಚಿ ಹಾಕಲು ಲೋಕಾಯುಕ್ತಕ್ಕೆ ಬೀಗ ಹಾಕಿ ಎಸಿಬಿ ರಚಿಸಲಾಯಿತು ಎಂದು ಆರೋಪಿಸಿದ್ದಾರೆ.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರ ಬಲಗೈ ಬಂಟ, ಮಾಜಿ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ವೈಟ್ ಟ್ಯಾಪಿಂಗ್ನಲ್ಲಿ 39.80 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗೆ 292 ಕೋಟಿ ರು. ಅಂದಾಜು ಇದ್ದರೂ 374 ಕೋಟಿ ರು.ಗಳಿಗೆ ಟೆಂಡರ್ ಕೊಟ್ಟಿದ್ದರು. ಯಾಕೆ ಶೇ.25ರಷ್ಟು ಹೆಚ್ಚು ಕೊಟ್ಟರು? ನೀರು ಇಂಗದ ಕಾಂಕ್ರೀಟ್ ರಸ್ತೆಗಳಿವು. 9.47 ಕಿ.ಮೀ. ರಸ್ತೆಗೆ 75 ಕೋಟಿ ರೂ.. ಅಂದಾಜು ಇದ್ದರೂ 115 ಕೋಟಿ ರೂ.ಗೆ ಮಂಜೂರಾತಿ ನೀಡಲಾಗಿತ್ತು. ಶೇ.53.86 ಹೆಚ್ಚುವರಿ ಮೊತ್ತಕ್ಕೆ ಯಾಕೆ ಕೊಟ್ಟರು? ಇದರ ದುರುದ್ದೇಶ ಏನು ಎಂದು ಪ್ರಶ್ನಿಸಿದ್ದಾರೆ.
ಹಾಸಿಗೆ, ದಿಂಬು, ಬಡವರಿಗೆ ಕೊಡುವ ಅನ್ನದಲ್ಲೂ ಭ್ರಷ್ಟಾಚಾರವನ್ನು ನೀವು ಬಿಟ್ಟಿಲ್ಲ. ಇಂದಿರಾ ಕ್ಯಾಂಟೀನ್ನಲ್ಲಿ 100 ಜನ ಊಟ ಮಾಡಿದರೆ ಸಾವಿರ ಜನಕ್ಕೆ ಬಿಲ್ ಮಾಡಲಾಗುತ್ತಿತ್ತು. 900 ಜನರ ದುಡ್ಡು ಯಾರಿಗೆ ಹೋಗುತ್ತಿತ್ತು ಎಂದು ಕೇಳಿದ್ದಾರೆ.
ಅಲ್ಪಸಂಖ್ಯಾತರ ಉದ್ಧಾರಕರು ನೀವೇ ಎನ್ನುತ್ತೀರಿ. ವಕ್ಫ್ ಬೋರ್ಡಿನ 29 ಸಾವಿರ ಎಕರೆ ಆಸ್ತಿಯನ್ನು ಯಾರು ಗುಳುಂ ಮಾಡಿದ್ದಾರೆ? 2.6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಇದು. ಅಲ್ಪಸಂಖ್ಯಾತರು, ದಲಿತರಿಗೆ ನ್ಯಾಯ ಕೊಡಲಿಲ್ಲ. ಹಿಂದುಳಿದ ಜನಾಂಗ, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲಿಲ್ಲ. ಲ್ಯಾಪ್ಟಾಪ್ ಖರೀದಿಯಲ್ಲೂ ಭ್ರಷ್ಟಾಚಾರ ಆಗಿತ್ತು. ಪ್ರತಿ ಇಲಾಖೆಯ ಭ್ರಷ್ಟಾಚಾರದಲ್ಲಿ ನೀವೇ ಮುಳುಗಿ ಹೋಗಿದ್ದಿರಿ. ಇವತ್ತು ಯಾವ ನೈತಿಕತೆಯಿಂದ ಹೀಗೆ ಮಾತನಾಡುತ್ತೀರಿ? ಇದರ ಹಿಂದೆ ಒಂದು ನರೇಟಿವ್, ಟೂಲ್ಕಿಟ್ ಬಳಸಲಾಗುತ್ತಿದೆ. ವಿಷಯಾಂತರ ಮಾಡಲು, ಜನರ ಮನಸ್ಸನ್ನು ನಿಮ್ಮ ಕಡೆ ವಾಲಿಸಿಕೊಳ್ಳುವ ಪ್ರಯತ್ನ ಇದು. ಇದು ಒಳ್ಳೆಯದಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಸತ್ಯ ಹರಿಶ್ಚಂದ್ರರು ಎನ್ನುವ ಇವರು ಮತ್ತು ಹೈಕಮಾಂಡಿನವರ ಬಲಗೈ ಬಂಟನ ಮನೆ ಮೇಲೆ 2017ರಲ್ಲಿ ದಾಳಿ ಆದಾಗ ಡೈರಿ ಸಿಕ್ಕಿತ್ತು. ಒಂದು ಸಾವಿರ ಕೋಟಿಗೂ ಹೆಚ್ಚು ಹಣ ನಿಮ್ಮ ಹೈಕಮಾಂಡಿಗೆ ಹೋಗಿತ್ತಲ್ಲವೇ? ಯಾರದದು ಸಾವಿರ ಕೋಟಿ ರೂ.? ಹೇಗೆ ಹೋಗಿತ್ತು? ಧರ್ಮದ ಹಣವೇ? ಕರ್ನಾಟಕದ ಬಜೆಟ್ನಲ್ಲಿ ಸಾವಿರ ಕೋಟಿ ರೂ. ಹೈಕಮಾಂಡ್ ವಿಶೇಷ ನಿಧಿ ಎಂದು ಮೀಸಲಾಗಿ ಇಟ್ಟಿದ್ದರೇ? ಅದನ್ನೂ ಮಾಡುವಷ್ಟು ಬುದ್ಧಿವಂತಿಕೆಯ ಜನರು ಕಾಂಗ್ರೆಸ್ಸಿಗರು ಎಂದು ಸುಧಾಕರ್ ಲೇವಡಿ ಮಾಡಿದರು.