ಸುಗಮ ಸಂಗೀತದ ಮೇರು ಗಾಯಕ ಚಂದ್ರಶೇಖರ ಕೆದ್ಲಾಯರು ಅಸ್ತಂಗತ

ಉಡುಪಿ : ಖ್ಯಾತ ಸುಗಮ ಸಂಗೀತ ಗಾಯಕ ಚಂದ್ರಶೇಖರ ಕೆದ್ಲಾಯ (72) ಅವರು ಹೃದಯಾಘಾತದಿಂದ ಜ. 24 ರಂದು ಬೆಳಿಗ್ಗೆ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

1950 ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಸ್ಕುತ್ತೂರು ಗ್ರಾಮದ ಹಾರ್ಯಾಡಿ ಎಂಬಲ್ಲಿ ಗಣಪಯ್ಯ ಕೆದ್ಲಾಯ ಮತ್ತು ಕಮಲಮ್ಮನವರ ಪುತ್ರರಾಗಿ ಜನಿಸಿದ ಚಂದ್ರಶೇಖರ ಕೆದ್ಲಾಯ ಅವರು ಕಳೆದ ಹಲವು ದಶಕಗಳಿಂದ ಸಂಗೀತ ಕ್ಷೇತ್ರದಲ್ಲಿ ಅನುಸರಣೀಯವಾದಂತಹ ಸಾಧನೆಯನ್ನು ಮಾಡಿದ್ದಾರೆ

ಶಿಕ್ಷಕನಾಗಿ ವೃತ್ತಿ ಜೀವನ ನಡೆಸಿದ ಇವರು ಪ್ರವೃತ್ತಿಯಲ್ಲಿ ಸಂಗೀತ, ಗಮಕ, ನಾಟಕಗಳ ಸಂಗೀತ ನಿರ್ದೇಶನ, ನೃತ್ಯ ರೂಪಕಗಳ ನಿರ್ದೇಶನದ ಮೂಲಕ ಕನ್ನಡ ನಾಡಿನಾದ್ಯಂತ ಖ್ಯಾತಿಯನ್ನು ಪಡೆದಿದ್ದಾರೆ.

ಹಂಗಾರಕಟ್ಟೆಯ ಚೇತನಾ ಪ್ರೌಢ ಶಾಲೆ, ಮಂಗಳೂರಿನ ಕೆನರಾ ಪ್ರೌಢ ಶಾಲೆ, ನಿರ್ಮಲಾ ಪ್ರೌಢ ಶಾಲೆ ಬ್ರಹ್ಮಾವರದಲ್ಲಿ 35 ವರ್ಷಗಳು ಪರಿಪೂರ್ಣವಾದ ಸಾರ್ಥಕ ಸೇವೆಯನ್ನು ಮಾಡುತ್ತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ (1992-93) ಹಾಗೂ ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ (2008)ಯನ್ನು ಪಡೆದಿರುತ್ತಾರೆ.

ಪ್ರಶಸ್ತಿಗಳು
ಗಡಿನಾಡಿನ ಕನ್ನಡಪರ ಹೋರಾಟಗಾರ, ದಿ.ಕಯ್ಯಾರ ಕಿಂಞ್ಞಣ್ಣ ರೈ ಅವರ ಹೆಸರಿನ ಪ್ರಶಸ್ತಿ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಕೆದ್ಲಾಯರಿಗೆ ಕರ್ನಾಟಕ ನಾಟಕ ಅಕಾಡಮಿಯಿಂದ ರಂಗ ಭಾರತಿ ಸನ್ಮಾನ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಆಳ್ವಾಸ್ ಶಿಕ್ಷಣ ಟ್ರಸ್ಟಿನ ‘ಉತ್ತಮ ಶಿಕ್ಷಕ ಪ್ರಶಸ್ತಿ’, ಕನ್ನಡ ಸಾಹಿತ್ಯ ಪರಿಷತ್ತಿನ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದಲ್ಲಿ ನೀಡಲಾದ ‘ಕರ್ನಾಟಕ ಶ್ರೀ’ ಬಿರುದುಗಳು ಸಹಿತ ಅನೇಕ ಪ್ರಶಸ್ತಿಗಳು ಲಭಿಸಿವೆ.
ಮೃತರು ಪತ್ನಿ, ಇಬ್ಬರು ಪುತ್ರರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Latest Articles

error: Content is protected !!