ಹೆಬ್ರಿ ಪಂಚಾಯತ್‌ ಇನ್ನು ಮುಂದೆ ಕ್ಯಾಶ್‌ಲೆಸ್‌

ಕಾರ್ಕಳ : ಸರಕಾರಿ ವ್ಯವಸ್ಥೆಗಳು ಡಿಜಿಟಲ್‌ ವ್ಯವಸ್ಥೆಯೊಂದಿಗೆ ಬದಲಾವಣೆ, ಮಾರ್ಪಾಡಾಗುತ್ತಿದ್ದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವುದು. ಪಾರದರ್ಶಕತೆಯೊಂದಿಗೆ ವಿಳಂಬ ನೀತಿಗೆ ಮುಕ್ತಿ ದೊರೆಯುವುದು. ಹೆಬ್ರಿ ಪಂಚಾಯತ್‌ ಈ ನಿಟ್ಟಿನಲ್ಲಿ ಮಾದರಿಯಾಗಿ ಗುರುತಿಸಿಕೊಂಡಿದ್ದು, ಸಂಪೂರ್ಣವಾಗಿ ಕ್ಯಾಶ್‌ಲೆಸ್‌ ವ್ಯವಸ್ಥೆ ಅನುಷ್ಠಾನಗೊಳಿಸುವತ್ತ ಮುಂದಾಗಿದೆ. ಕಳೆದ ಅ. 1ರಿಂದ ಹೆಬ್ರಿ ಪಂಚಾಯತ್‌ನಲ್ಲಿ ಮನೆ, ವಾಣಿಜ್ಯ ತೆರಿಗೆ, ಟ್ರೇಡ್‌ ಲೈಸನ್ಸ್‌, ನೀರಿನ ಬಿಲ್‌ ಎಲ್ಲವನ್ನೂ ಗ್ರಾಮಸ್ಥರು ಸುಲಭವಾಗಿ ಆನ್‌ಲೈನ್‌ ಮೂಲಕ ಜಮೆ ಮಾಡುತ್ತಿದ್ದಾರೆ.‌ ಸ್ವೈಪ್‌, ಗೂಗಲ್‌ ಪೇ, ಫೋನ್‌ ಪೇ, ಕ್ಯೂಆರ್‌ ಕೋಡ್ ಮೂಲಕ‌ ಬಿಲ್ ಪಾವತಿಸುತ್ತಿದ್ದಾರೆ. ಇದರಿಂದ ಸಾಲುಗಟ್ಟಿ ನಿಲ್ಲುವ ಪ್ರಮೇಯ ಇಲ್ಲದಂತಾಗಿದೆ ಮತ್ತು ನೇರವಾಗಿ ಪಂಚಾಯತ್‌ ಖಾತೆಗೆ ಜಮೆಯಾಗುತ್ತಿದೆ. ಹೆಬ್ರಿ ಪಂಚಾಯತ್‌ ವ್ಯಾಪ್ತಿಯಲ್ಲಿ 2000 ಕ್ಕೂ ಅಧಿಕ ಕುಟುಂಬಗಳಿದ್ದು, 500 ಮಳಿಗೆಗಳಿವೆ. ಪಂಚಾಯತ್‌ ವತಿಯಿಂದ 550ಕ್ಕೂ ಅಧಿಕ ನೀರಿನ ಸಂಪರ್ಕ ನೀಡಲಾಗಿದೆ.

ಶಿವರಾಮ ಕಾರಂತ ಪ್ರಶಸ್ತಿ
ಹೆಬ್ರಿ ಪಂಚಾಯತ್‌ (ಆಡಳಿತ ವ್ಯವಸ್ಥೆಗಾಗಿ) ಈ ಬಾರಿ ಶಿವರಾಮ ಕಾರಂತ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನ. 26ರಂದು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಹೊಳಪು-2022 ಜನಾಧಿಕಾರದ ಸಂಚಲನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿತು.

ಭ್ರಷ್ಟಾಚಾರಕ್ಕೂ ತಡೆ
ಕಂದಾಯ, ಆರ್‌ಟಿಒ ಸೇರಿದಂತೆ ಎಲ್ಲ ಸರಕಾರಿ ಇಲಾಖೆಯಲ್ಲೂ ಆನ್‌ಲೈನ್‌ ನಿಯಮ ಜಾರಿಯಾದಲ್ಲಿ ಭ್ರಷ್ಟ ವ್ಯವಸ್ಥೆಗೂ ತಕ್ಕ ಮಟ್ಟಿಗೆ ಕಡಿವಾಣ ಬೀಳಲಿದೆ. ದುರುಪಯೋಗ ಆರೋಪವೂ ಕಡಿಮೆಯಾಗಲಿದೆ ಎಂದು ಹೆಬ್ರಿ ಗ್ರಾ.ಪಂ. ಅಧ್ಯಕ್ಷೆ ಮಾಲತಿ ಅಭಿಪ್ರಾಯಪಟ್ಟಿದ್ದಾರೆ.

ಗ್ರಾಮಸ್ಥರಿಂದ ಉತ್ತಮ ಸ್ಪಂದನೆ
ಹೆಬ್ರಿ ಪಂಚಾಯತ್‌ನಲ್ಲಿ ಕಳೆದ ಅಕ್ಟೋಬರ್‌ ತಿಂಗಳಿನಿಂದ ಆನ್‌ ಲೈನ್‌ ಪಾವತಿ ಜಾರಿಯಾಗಿದೆ. ಗ್ರಾಮಸ್ಥರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು ಶೇ. 75 ಮಂದಿ ಆನ್‌ಲೈನ್‌ ವ್ಯವಸ್ಥೆಗೆ ಒಗ್ಗಿಕೊಂಡಿದ್ದಾರೆ ಹೆಬ್ರಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಸದಾಶಿವ ಶೆರ್ವೆಗಾರ್‌ ಹೇಳಿದ್ದಾರೆ.





























































































































































































































error: Content is protected !!
Scroll to Top