ನಾಳೆಯಿಂದ ಆಯುಷ್ಮಾನ್‌ ಭಾರತ್‌ ಕಾರ್ಡ್‌ ವಿತರಣೆ

ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು: ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಆಯುಷ್ಮಾನ್ ಭಾರತ್–ಪ್ರಧಾನಮಂತ್ರಿ ಜನಾರೋಗ್ಯ-ಆರೋಗ್ಯ ಕರ್ನಾಟಕ ಯೋಜನೆಯ ಗುರುತಿನ ಚೀಟಿಗಳ ವಿತರಣೆ ಡಿ. 8 ರಿಂದ ಪ್ರಾರಂಭವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿ.8 ರಂದು ಕಾರ್ಡ್‌ ವಿತರಣೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ. ರಾಜ್ಯದ 5.09 ಕೋಟಿ ಜನರಿಗೆ ಕಾರ್ಡ್‌ ವಿತರಣೆಯಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.
ಎಲ್ಲ ಜಿಲ್ಲೆಗಳಲ್ಲಿ ಎಬಿ-ಪಿಎಂಜೆಎವೈ-ಎಆರ್‌ಕೆ ಗುರುತಿನ ಚೀಟಿ ವಿತರಿಸಲು ಆರೋಗ್ಯ ಇಲಾಖೆಯಿಂದ ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಪಿಎಲ್ ಕುಟುಂಬಗಳು ಒಳಗೊಂಡಂತೆ ಎಲ್ಲಾ ಅರ್ಹ 5.09 ಕೋಟಿ ಫಲಾನುಭವಿಗಳಿಗೆ ಗುರುತಿನ ಚೀಟಿಗಳನ್ನು ಸಿದ್ಧಪಡಿಸಿ ಮುದ್ರಿಸಿ ವಿತರಿಸುವ ಗುರಿ ಹೊಂದಲಾಗಿದೆ.
ಕಾರ್ಡಿನಲ್ಲಿ ಎಬಿಎಚ್ಎ (Ayushman Bharath Health Account) ಗುರುತಿನ ಸಂಖ್ಯೆಯನ್ನು ಸಹ ನಮೂದು ಮಾಡಿದ್ದು, ರೋಗಿಯ ಆರೋಗ್ಯ ದಾಖಲೆಗಳನ್ನು ಈ ಗುರುತಿನ ಚೀಟಿ ಒಳಗೊಂಡಿದೆ. ಆದ್ದರಿಂದ ಚಿಕಿತ್ಸೆಗಾಗಿ ಹೆಚ್ಚಿನ ದಾಖಲೆಗಳನ್ನು ರೋಗಿಗಳು ಕೊಂಡೊಯ್ಯುವ ಅಗತ್ಯವಿಲ್ಲ. ಗ್ರಾಮ ಒನ್‌, ಕರ್ನಾಟಕ ಒನ್ ಹಾಗೂ ಜನ ಸೇವಕ ಕೇಂದ್ರಗಳಿಂದ ಫಲಾನುಭವಿಗಳ ಮಾಹಿತಿ ಸಂಗ್ರಹಿಸಿದ್ದು, 1.20 ಕೋಟಿ ಗುರುತಿನ ಚೀಟಿ ಮುದ್ರಣ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ 3 ತಿಂಗಳ ಒಳಗಾಗಿ ಉಳಿದ 4 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಎಬಿ-ಪಿಎಂಜೆಎವೈ-ಎಆರ್.ಕೆ ಗುರುತಿನ ಚೀಟಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

Latest Articles

error: Content is protected !!