ಕರ್ನಾಟಕ ಸೇರ ಬಯಸಿದ ಸೊಲ್ಲಾಪುರದ 11 ಗ್ರಾಮ

ಪಂಚಾಯತ್‌ಗಳಲ್ಲಿ ನಿರ್ಣಯ ಅಂಗೀಕಾರ ; ಮಹಾರಾಷ್ಟ್ರಕ್ಕೆ ಮುಖಭಂಗ

ಸೊಲ್ಲಾಪುರ: ಅತ್ತ ಮಹಾರಾಷ್ಟ್ರ ಗಡಿ ವಿವಾದವನ್ನು ಕೆದಕಿ ತಕರಾರು ಎಬ್ಬಿಸುತ್ತಿರುವಾಗಲೇ ಮಹಾರಾಷ್ಟ್ರದಲ್ಲಿರುವ ಗಡಿ ಜಿಲ್ಲೆ ಸೊಲ್ಲಾಪುರದ 11 ಗ್ರಾಮಗಳು ಕರ್ನಾಟಕದ ಜತೆ ಸೇರಲು ನಿರ್ಣಯ ಅಂಗೀಕರಿಸಿವೆ. ಈ ಬೆಳವಣಿಗೆ ಗಡಿ ತಂಟೆ ಎಬ್ಬಿಸಿರುವ ಮಹಾರಾಷ್ಟ್ರ ಸರಕಾರಕ್ಕೆ ತೀವ್ರ ಮುಖಭಂಗವುಂಟುಮಾಡಿದೆ.
ಸೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿ ಮೂಲಕ ಈ ಪಂಚಾಯತ್‌ಗಳು ಸರಕಾರಕ್ಕೆ ಮನವಿ ಸಲ್ಲಿಸಿ, ಕರ್ನಾಟಕ ಸೇರಲು ನಿರಾಕ್ಷೇಪಣ ಪತ್ರ ನೀಡುವಂತೆ ಕೋರಿವೆ. ಪಂಚಾಯತ್‌ಗಳ ನಿರ್ಣಯದ ಪ್ರತಿ ಹಾಗೂ ಅರ್ಜಿ ತಮ್ಮ ಕಚೇರಿಗೆ ತಲುಪಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಕ್ಕಲಕೋಟೆ ತಾಲೂಕಿನ ಅಳ್ಗೆ ಹಾಗೂ ಇನ್ನೂ 10 ಗ್ರಾಮಗಳ ನಿವಾಸಿಗಳು ಇತ್ತೀಚೆಗೆ ಸೊಲ್ಲಾಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮೂಲಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಶಿಕ್ಷಣ ಮತ್ತು ಇತರ ಸೌಲಭ್ಯಗಳ ನೀಡುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ. ನಮ್ಮ ಗ್ರಾಮಗಳು ಯಾವುದೇ ಅಭಿವೃದ್ಧಿ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಗಡಿಯಾಚೆಗಿನ ಗ್ರಾಮಗಳನ್ನು ಕರ್ನಾಟಕ ಸರ್ಕಾರ ಅಭಿವೃದ್ಧಿಪಡಿಸಿದೆ ಎಂದು ಈ ಗ್ರಾಮಗಳ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಆ ಗ್ರಾಮಗಳಲ್ಲಿ ನೆಲೆಸಿರುವ ಕೆಲವು ಕನ್ನಡಿಗರಿಗೆ ಮಹಾರಾಷ್ಟ್ರ ಪೊಲೀಸರು ನೋಟಿಸ್‌ ಜಾರಿ ಮಾಡಿ ಪೂರ್ವಾನುಮತಿ ಪಡೆಯದೆ ಕರ್ನಾಟಕದೊಂದಿಗೆ ವಿಲೀನಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರೆ ಅಥವಾ ಘೋಷಣೆಗಳನ್ನು ಕೂಗಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಗಡಿಯಲ್ಲಿ ಸುಮಾರು 60 ಹಳ್ಳಿಗಳು ಕರ್ನಾಟಕದೊಂದಿಗೆ ವಿಲೀನಗೊಳ್ಳಲು ಬಯಸುತ್ತಿವೆ. ಮುಖ್ಯಮಂತ್ರಿಗಳ ಭೇಟಿಗೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಶೀಘ್ರವೇ ಬೆಳಗಾವಿ ಡಿಸಿ, ಎಸ್ಪಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದು ಇಲ್ಲಿ ಕನ್ನಡ ಮುಖಂಡರು ಹೇಳಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರದ ಜತ್ತದ 42 ಗ್ರಾಮಗಳು ಕರ್ನಾಟಕದೊಂದಿಗೆ ವಿಲೀನಗೊಳ್ಳಲು ಬಯಸಿದ್ದವು. ಗಡಿ ಭಾಗದಲ್ಲಿರುವ ತನ್ನ ಗ್ರಾಮಗಳನ್ನು ಕರ್ನಾಟಕ ಸರಕಾರ ಬಹಳಷ್ಟು ಅಭಿವೃದ್ಧಿಪಡಿಸಿದೆ. ಮುಖ್ಯವಾಗಿ ನೀರಾವರಿ, ಶಾಲೆ, ರಸ್ತೆಗಳು ಅಭಿವೃದ್ಧಿಗೊಂಡಿವೆ. ಆದರೆ ಮಹಾರಾಷ್ಟ್ರದ ಭಾಗದಲ್ಲಿ ಇನ್ನೂ ಮೂಲಸೌಲಭ್ಯಗಳ ಕೊರತೆಯಿದೆ. ಹೀಗಾಗಿ ಗಡಿ ಭಾಗದ ಜನರು ಕರ್ನಾಟಕ ಸೇರುವ ಒಲವು ಹೊಂದಿದ್ದಾರೆ.

Latest Articles

error: Content is protected !!