ʼದಾರಿದೀಪʼ

ದಿನ ಬೆಳಗಾದರೆ ಸಾಕು ತಾಯಿ ಬೈದುದಕ್ಕೆ, ತಂದೆ ಜೋರು ಮಾಡಿದಕ್ಕೆ, ಟೀಚರ್ ಪ್ರಶ್ನಿಸಿದಕ್ಕೆ, ಮನೆಯವರು ಬುದ್ಧಿ ಹೇಳಿದಕ್ಕೆ, ಸಹಪಾಠಿಗಳು ಅವಮಾನಸಿದಕ್ಕೆ ಸಹಿಸಿಕೊಳ್ಳದ ಮನಸುಗಳು ಇಂದು ಸಾವಿನದಾರಿಯ ಹುಡುಕಿ ಬದುಕು ಕೊನೆಗೊಳಿಸುತ್ತಿರುವುದು ಅತ್ಯಂತ ನೋವಿನ ಮತ್ತು ಆತಂಕಕಾರಿ ಸಂಗತಿ.
ಸುಖಕರ ಜೀವನ ಸಾಗಿಸುವ ಇಂದಿನ ಕೆಲವು ಮಕ್ಕಳು ಮಾನಸಿಕವಾಗಿ ಕಷ್ಟಕರದಲ್ಲಿದ್ದಾರೆ. ಹಲವಾರು ಹೆತ್ತವರು ಕೌನ್ಸಿಲರ್‌ಗಳನ್ನ ಭೇಟಿ ಮಾಡಿಸುತ್ತಾರೆ. ಇನ್ನು ಕೆಲವು ಮಕ್ಕಳು ಸಮಾಧಾನ ಸಿಗಲೆಂದು ಗುಳಿಗೆಗಳತ್ತ ಹೊರಳಿದ್ದಾರೆ. ಗಳಿಗೆ ಗಳಿಗೆಗೆ ಗುಳಿಗೆ ತಿನ್ನುವ ರೋಗಿಗಳಾಗುತ್ತಿದ್ದಾರೆ. ತಿಂದರೂ ರೋಗಿ, ತಿನ್ನದಿದ್ದರೂ ರೋಗಿ ಎನ್ನುವ ಮನಸ್ಥಿತಿ ಬೆಳೆಯುವ ಸಿರಿ ಮೊಳಕೆಯಲ್ಲಿ ಮೂಡುತ್ತಿದೆ.
ಸಣ್ಣ ಸಣ್ಣ ವಿಷಯಗಳಲ್ಲೂ ಖುಷಿ ಕಾಣಬೇಕಾದ ಮಗುವು ಸಣ್ಣ ವಿಷಯಕ್ಕೂ ಕೂಡ ಎಗರಾಡುವುದು, ಮರುಗುವುದು, ಕೊರಗುವುದು ಯಾಕೆ ?
ಸ್ಪರ್ಧೆಯ ಅಂಗಳದಲ್ಲಿ ನಿಂತ ಮಗುವು ಸೋಲು, ಗೆಲುವಿನ ಫಲಿತಾಂಶ ಬರುವ ಮುನ್ನವೇ ಆತಂಕಕ್ಕೀಡಾಗುತ್ತದೆ. ನಿರೀಕ್ಷಿತ ಅಂಕ ಬರದಿದ್ದರೆ ನೊಂದುಕೊಳ್ಳುತ್ತದೆ. ಏನಂದುಕೊಳ್ಳುವರೋ ಎಂದು ತಳಮಳಕ್ಕೀಡಾಗುತ್ತದೆ. ಹುಸಿಮನಸು ಕಸಿವಿಸಿಗೊಂಡು ನಡುಗುತ್ತದೆ. ವೇದನೆಪಡುತ್ತದೆ. ಸಂವೇದನೆ ಕಳಕೊಳ್ಳುತ್ತದೆ. ಹಾಗಾದರೆ ಆರೋಗ್ಯಪೂರ್ಣ ಸ್ಪರ್ಧೆಯಲ್ಲಿ ಮಕ್ಕಳನ್ನು ಸಜ್ಜುಗೊಳಿಸುವುದು ಹೇಗೆ ?
ಹುಚ್ಚು ಕೋಡಿ ಮನಸು ಇದು ಹದಿನಾರರ ವಯಸ್ಸು ಎನ್ನುತ್ತದೆ ಕವಿವಾಣಿ. ಬದುಕಿನ ಸಂಕ್ರಮಣ ಕಾಲದಲ್ಲಿ ಆಕ್ರಮಿಸಿಕೊಳ್ಳುವ ಆಕರ್ಷಣೆಗಳಿಗೆ ಒಳಗಾದ ಯುವಕ-ಯುವತಿಯರ ಪಾಡು ಘರ್ಷಣೆಗೆ ಒಳಗಾಗುತ್ತಿದೆ. ಪ್ರೀತಿ-ಪ್ರೇಮ-ಅನುರಾಗದ ಗುಂಗಲ್ಲಿ ಹೆತ್ತವರ ಒಡಲಾಳ ಮರೆತಿದ್ದಾರೆ. ಏಕಾಂತದ ಸುಳಿಯೊಳಗೆ ಬದುಕಿನಲ್ಲಿ ನಿರಾಶೆಯನ್ನು ಎದುರಿಸುತ್ತಿದ್ದಾರೆ. ವಾಟ್ಸಾಪ್, ಫೇಸ್ಬುಕ್, ಇಂನ್ಸ್ಟ, ಹೈಕ್, ಲೈಕ್, ಶೇರ್ಚಾಟ್, ಸ್ನಾಪ್ ಚಾಟ್, ಟ್ವಿಟ್ಟರ್, ಟೆಲಿಗ್ರಾಮ್, ಕೂ, ಮೀಟಪ್, ನೆಕ್ಷ್ಟ್ ಡೋರ್, ಟ್ವಿಟ್ ಡೆಕ್, ಸ್ಕೈಪ್, ವಿಬರ್, ಲೈನ್, ಕ್ಯೊರಾ ಇತ್ಯಾದಿಯಲ್ಲಿ ಜಾಲಾಡಿಸುವ ನಮ್ಮ ಯುವ ಮನಸುಗಳಿಗೆ ಬದುಕುವ ದಾರಿಯನ್ನು ಹೇಗೆ ಕಂಡುಕೊಳ್ಳಬೇಕೆಂದು ಅರ್ಥವಾಗದಿರುವುದು ದುರಂತವೇ ಸರಿ. ಇಂದಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದಷ್ಟು ಕಷ್ಟವೇ ! ಇದಕ್ಕೆಲ್ಲ ಪರಿಹಾರವಿಲ್ಲವೇ ?
ಹೆಜ್ಜೆ ತಪ್ಪುತ್ತಿರುವವರ ದಾರಿಗೆ ಗೆಜ್ಜೆ ಕಟ್ಟುವವರು ಯಾರು. ಹೆತ್ತವರೋ ? ಶಿಕ್ಷಕರೋ ? ಒಟ್ಟು ಸಮಾಜವೋ ? ಉಪದೇಶ ಮಾಡ ಹೊರಟರೇ ಆದೇಶವಾಗುತ್ತೆ. ಆದೇಶಿಸಿ ತಿದ್ದಲು ಪ್ರಯತ್ನಿಸಿದರೆ ಆಕ್ರೋಶ ಮೊಳಗುತ್ತದೆ. ಬೈದರೆ ನೊಂದುಕೊಳ್ಳುತ್ತಾರೆ, ಹೊಡೆದರೆ ಹಿಂಸೆಯಾಗುತ್ತೆ ಅನ್ನೋವಾಗ ಹಾಗಾದರೆ ಬುದ್ಧಿ ಯಾರಿಗೆ ಹೇಳಿ ಏನೂ ಪ್ರಯೋಜನಾ ? ಎಂದು ಕೈಕಟ್ಟಿ ಕುಳಿತರೇ ಕಣ್ಣೆದುರು ನಡೆಯುತ್ತಿರುವ ಅಸ್ವಸ್ಥತೆಯನ್ನು ಹೋಗಲಾಡಿಸುವುದು ಹೇಗೆ ?
ಇಂದು ಹೆತ್ತವರಿಬ್ಬರಿಗೂ ಪುರುಸೊತ್ತಿಲ್ಲ. ಮಕ್ಕಳ ಆಶೆ-ಆಕಾಂಕ್ಷೆಗಳನ್ನು ತಿಳಿಯುವಷ್ಟು ಸಮಯವಿಲ್ಲ. ಹಸುಕೂಸಿನ ಕೈಗೂ ಮೊಬೈಲ್ ಕೊಟ್ಟು ಸಮಾಧಾನಿಸುವ ಧಾವಂತದ ನಡೆಯಲ್ಲಿದ್ದೇವೆ. ಭಾವನಾತ್ಮಕತೆ ಕಳೆದುಕೊಂಡ ಮಗುವು ಯಾಂತ್ರಿಕವಾಗಿದೆ. ಪ್ರತಿಯೊಂದು ಸಮಸ್ಯೆಗೂ ಗೂಗಲ್, ಡೂಗಲ್ ಮೊರೆ ಹೋಗಿದ್ದಾರೆ. ಪರಿಹಾರ ದೊರೆಯದಾಗ ಕೆರೆ-ಬಾವಿ, ನೇಣು ಕುಣಿಕೆ ಕೊರಳೊಡ್ಡಿ, ಹಳಿ-ಕಂಬಿ, ವಿಷದ ಬಿರಡೆಗೆ ವಶರಾಗಿದ್ದಾರೆ. ಜೀವನವ ಅರ್ಥಮಾಡಿಕೊಳ್ಳದೆ ಶವವಾಗಿದ್ದಾರೆ.

ಲೇಖನ : ಸಂತೋಷ್‌ ನೆಲ್ಲಿಕಾರು





























































































































































































































error: Content is protected !!
Scroll to Top