ಡಿ. 9-11 : ಶಿವಪುರದಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ

ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಫ್ರೆಂಡ್ಸ್‌ ಶಿವಪುರ ಸಹಯೋಗ – 54 ತಂಡಗಳು ಭಾಗಿ

ಹೆಬ್ರಿ : ಪ್ರೌಢಶಾಲಾ ವಿಭಾಗದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ ಡಿ. 9ರಿಂದ 11ರವರೆಗೆ ಶಿವಪುರ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಮತ್ತು ಫ್ರೆಂಡ್ಸ್‌ ಶಿವಪುರ ಸಹಯೋಗದಲ್ಲಿ ಅತ್ಯಂತ ಅದ್ಧೂರಿಯಾಗಿ ಮ್ಯಾಟ್‌ ಮಾದರಿಯ ಪಂದ್ಯಾಟ ಜರಗಲಿದೆ. ಈ ಹಿನ್ನೆಲೆಯಲ್ಲಿ ನ. 26 ಸಂಜೆ ಶಿವಪುರ ಶಂಕರಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ದೈಹಿಕ ಶಿಕ್ಷಣ ಶಿಕ್ಷಕ ಆರೂರು ತಿಮ್ಮಪ್ಪ ಶೆಟ್ಟಿ, ರಾಜ್ಯದ 27 ಜಿಲ್ಲೆಗಳಿಂದ ಬಾಲಕ ಹಾಗೂ ಬಾಲಕಿಯರ ತಂಡಗಳು ಭಾಗವಹಿಸಲಿದೆ. ಮೂರು ದಿನಗಳ ಕಾಲ ಮೂರು ಅಂಕಣದಲ್ಲಿ ಪಂದ್ಯಾಟ ನಡೆಯಲಿದೆ. ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದ್ದು ಇಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದರು.

17 ಸಮಿತಿ ರಚನೆ
ಈ ಪಂದ್ಯಾಟ ನಮ್ಮೂರಿನ ಹಬ್ಬವಾಗಬೇಕು. ಕ್ರೀಡಾಕೂಟದ ಸಮಾರಂಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ವಿ. ಸುನೀಲ್‌ ಕುಮಾರ್‌, ಎಸ್.‌ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮ, ಪಂದ್ಯಾಟವನ್ನು ವ್ಯವಸ್ಥಿತವಾಗಿ ಸಂಘಟಿಸುವ ನಿಟ್ಟಿನಲ್ಲಿ 17 ಉಪಸಮಿತಿಯನ್ನು ರಚಿಸಲಾಗುವುದು. 700 ಮಂದಿ ಸ್ವಯಂ ಸೇವಕರು ಕಾರ್ಯನಿರ್ವಹಿಸಲಿದ್ದಾರೆ.

ಗ್ಯಾಲರಿ ನಿರ್ಮಾಣ
3 ಸಾವಿರಕ್ಕೂ ಅಧಿಕ ಮಂದಿ ಕುಳಿತು ಪಂದ್ಯ ವೀಕ್ಷಿಸಲು ಗ್ಯಾಲರಿ ನಿರ್ಮಿಸಲಾಗುವುದು. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಭಾಗದ ಆಹಾರ ಮಾಡಲಾಗುವುದು. ಸ್ವಚ್ಛತೆ, ವಸತಿ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುವುದು. ಇಲ್ಲಿ ಉತ್ತಮ ಪ್ರದರ್ಶನ ತೋರಿದ ಕ್ರೀಡಾಳುಗಳು ಡಿ. 27 ರಿಂದ 30 ರವೆಗೆ ಜಾರ್ಖಂಡ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಆಡಲಿದ್ದಾರೆ ಎಂದವರು ತಿಳಿಸಿದರು.
ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ರಾಜೇಶ್‌ ಸುವರ್ಣ, ಬಿಇಒ ಕಚೇರಿಯ ರವಿಚಂದ್ರ ಕಾರಂತ್‌, ಶಂಕರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಅಡಿಗ, ರಾಜ್ಯ ಮಟ್ಟದ ಕಬಡ್ಡಿ ತೀರ್ಪುಗಾರ ಶಶಿಧರ ಶೆಟ್ಟಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್‌ ಪೂಜಾರಿ, ಫ್ರೆಂಡ್ಸ್‌ ಶಿವಪುರದ ಅಧ್ಯಕ್ಷ ಸುರೇಶ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿನಯ್‌ ಕುಮಾರ್‌, ಜೊತೆ ಕಾರ್ಯದರ್ಶಿ ಹರೀಶ್‌ ಪೂಜಾರಿ, ಆಯೋಜನಾ ಸಮಿತಿ ಅಧ್ಯಕ್ಷ ಸುಮಿತ್‌ ಶೆಟ್ಟಿ, ಉಪಾಧ್ಯಕ್ಷ ಜಗದೀಶ್‌, ಕೋಟಿನಾಥೇಶ್ವರ ದೇವಸ್ಥಾನದ ಮೊಕ್ತೇಸರ ಶಂಕರ ಬಡ್ಕಿಲ್ಲಾಯ, ರಮೇಶ್‌ ಶಿವಪುರ, ನಿತ್ಯಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರಮಾನಂದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.





























































































































































































































error: Content is protected !!
Scroll to Top