Saturday, December 10, 2022
spot_img
Homeಅಂಕಣಆರೋಗ್ಯ ಧಾರಾ - ಚಳಿಗಾಲದಲ್ಲಿ ಶುಂಠಿ ಬಳಸಿ ಆರೋಗ್ಯದಿಂದಿರಿ

ಆರೋಗ್ಯ ಧಾರಾ – ಚಳಿಗಾಲದಲ್ಲಿ ಶುಂಠಿ ಬಳಸಿ ಆರೋಗ್ಯದಿಂದಿರಿ


ಚಳಿಗಾಲ ಪ್ರಾರಂಭವಾಗಿದೆ. ದೇಹವನ್ನು ಬೆಚ್ಚಗಿಡಲು ನಾವು ಸ್ವೆಟರ್,ಶಾಲುಗಳನ್ನು ಬಳಸುತ್ತೇವೆ. ಹಾಗೆಯೇ ಕೆಲವು ಉಷ್ಣವಿರುವ ಆಹಾರವನ್ನು ಸೇವಿಸುತ್ತೇವೆ. ಎಲ್ಲರ ಮನೆಯಲ್ಲಿ ಅಡುಗೆಗೆ ಬಳಸುವ ಖಾದ್ಯದ ರುಚಿಯನ್ನು ಹೆಚ್ಚಿಸುವ ಶುಂಠಿಯನ್ನು ಬಳಸುವುದರಿಂದ ನಮ್ಮ ದೇಹವನ್ನು ಚಳಿಯಿಂದ ರಕ್ಷಿಸಬಹುದು. ದಿನನಿತ್ಯ ಬಳಸುವ ಶುಂಠಿಯಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
ಸಂಸ್ಕೃತದಲ್ಲಿ ಶುಂಠಿಗೆ ಆರ್ದ್ರಕ ಎಂದು ಹೆಸರು. ಇದನ್ನು ವಿಶ್ವಭೇಷಜ ಎಂದು ಕೂಡ ಕರೆಯುತ್ತಾರೆ. ಅದರ ಅರ್ಥ ಎಲ್ಲ ರೋಗಗಳಿಗೆ ಔಷಧ ಎಂದು.
ಚಳಿಗಾಲದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಶುಂಠಿ ಪರಿಹಾರ ನೀಡುತ್ತದೆ. ಇದರ ಬಗ್ಗೆ ತಿಳಿದುಕೊಳ್ಳೋಣ.
• ಶುಂಠಿಯ ಗುಣಗಳು
ರುಚಿಯಲ್ಲಿ ಖಾರ, ಸ್ವಭಾವದಲ್ಲಿ ಗುರು, ತೀಕ್ಷ್ಣ ಹಾಗೂ ಉಷ್ಣವೀರ್ಯ, ಕಫ ದೋಷವನ್ನು ಕಡಿಮೆ ಮಾಡುತ್ತದೆ.
• ಚಳಿಗಾಲದಲ್ಲಿ ಶುಂಠಿಯ ಕಷಾಯ, ಚಹಾ ಅಥವಾ ಕಾಫಿ ಮಾಡಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು.
• ಊಟ ಮಾಡುವ ಮೊದಲು ಚಿಕ್ಕ ಹಸಿ ಶುಂಠಿಯನ್ನು ಸ್ವಲ್ಪ ಉಪ್ಪಿನೊಂದಿಗೆ ಚಪ್ಪರಿಸಿದರೆ ಅಗ್ನಿಮಾಂದ್ಯ, ಕರುಳಿನ ಸಮಸ್ಯೆ, ಅಜೀರ್ಣ ಸಮಸ್ಯೆ ಕಾಡುವುದಿಲ್ಲ.
• ಚಳಿಗಾಲದಲ್ಲಿ ತಲೆನೋವು ಕಾಡುವುದು ಸಾಮಾನ್ಯ. ಶುಂಠಿಯನ್ನು ನೀರಿನಲ್ಲಿ ತೇಯ್ದು ಹಣೆಗೆ ಹಚ್ಚಿದರೆ ತಲೆನೋವು ಕಡಿಮೆಯಾಗುತ್ತದೆ.
• ಚಳಿಗಾಲದ ಇನ್ನೊಂದು ಸಮಸ್ಯೆ ಗಂಟು ನೋವು. ಎಳ್ಳೆಣ್ಣೆಯಲ್ಲಿ ಶುಂಠಿ ರಸವನ್ನು ಬೆರೆಸಿ ಗಂಟುಗಳಿಗೆ ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ.
• ಶೀತ, ನೆಗಡಿ, ಕೆಮ್ಮು, ಗಂಟಲು ನೋವು ಚಳಿಗಾಲದಲ್ಲಿ ಕಾಡುವುದು ಸಾಮಾನ್ಯ. ದಿನಕ್ಕೆ ಎರಡು ಸಲ ಶುಂಠಿಯ ಕಷಾಯ ಸೇವಿಸುವುದರಿಂದ ಇದು ಗುಣವಾಗುತ್ತದೆ.
ಶುಂಠಿ ಕಷಾಯ ಮಾಡುವ ವಿಧಾನ
ಒಂದು ಲೋಟ ನೀರಿಗೆ ಚಿಕ್ಕ ಹಸಿ ಶುಂಠಿ, ನಾಲ್ಕು ತುಳಸಿ ಎಲೆ, ಅರ್ಧ ಚಮಚ ಕರಿ ಮೆಣಸಿನ ಹುಡಿ, ಬೆಲ್ಲ, ಕಾಲು ಚಮಚ ಅರಿಶಿಣ ಪುಡಿ ಹಾಕಿ ಕಾಲು ಲೋಟ ಆಗುವವರೆಗೆ ಕುದಿಸಿ ಬಿಸಿ ಇರುವಾಗಲೇ ಸೋಸಿ ಕುಡಿಯಿರಿ. ಬೇಕಾದರೆ ಸ್ವಲ್ಪ ಹಾಲು ಕೂಡ ಬೆರೆಸಬಹುದು. ಮಕ್ಕಳಿಗೆ ಶುಂಠಿಯ ರಸವನ್ನು ಜೇನುತುಪ್ಪದ ಜತೆ ನೀಡಬಹುದು. ಇದರಿಂದ ಕೆಮ್ಮು ನಿವಾರಣೆಯಾಗುತ್ತದೆ.
• ಬಾಯಿರುಚಿ ಕೆಟ್ಟುಹೋಗಿದ್ದರೆ ಶುಂಠಿಯ ರಸ ಹಾಗೂ ಜೀರಿಗೆ ಪುಡಿ ಸೇರಿಸಿ ಸೇವಿಸುವುದರಿಂದ ಬಾಯಿ ರುಚಿ ಹೆಚ್ಚಿಸಬಹುದು.
• ನಿತ್ಯ ಆಹಾರದಲ್ಲಿ ಶುಂಠಿಯನ್ನು ಸೇವಿಸಿದರೆ ಮಲಬದ್ಧತೆ ದೂರ ಮಾಡಬಹುದು.
ಚಳಿಗಾಲದಲ್ಲಿ ಶುಂಠಿಯನ್ನು ಬಳಸಿ ಆರೋಗ್ಯದಿಂದಿರಿ
ಡಾ.ಹರ್ಷಾ ಕಾಮತ್
ಖ್ಯಾತ ಆಯುರ್ವೇದ ವೈದ್ಯರು

LEAVE A REPLY

Please enter your comment!
Please enter your name here

Most Popular

error: Content is protected !!