Thursday, December 1, 2022
spot_img
Homeಸುದ್ದಿಉಗ್ರ ಶಾರೀಕ್‌ ಹಿಟ್‌ಲಿಸ್ಟಲ್ಲಿ ಮಂಗಳೂರಿನ ಮೂರು ದೇಗುಲ

ಉಗ್ರ ಶಾರೀಕ್‌ ಹಿಟ್‌ಲಿಸ್ಟಲ್ಲಿ ಮಂಗಳೂರಿನ ಮೂರು ದೇಗುಲ

ಐಸಿಸ್‌ ಸೇರುವ ಸಲುವಾಗಿ ಟ್ರಯಲ್‌ ಸ್ಫೋಟ

ಮಂಗಳೂರು: ಮಂಗಳೂರಿನಲ್ಲಿ ನ.19ರಂದು ಸಂಭವಿಸಿದ ಆಟೋ ರಿಕ್ಷಾ ಸ್ಫೋಟದ ಉಗ್ರ ಮಹಮ್ಮದ್‌ ಶಾರೀಕ್‌ನ ನಿಜವಾದ ಗುರಿ ಮಂಗಳೂರಿನ ಮೂರು ಮುಖ್ಯ ದೇವಸ್ಥಾನಗಳಾಗಿದ್ದವು ಎನ್ನಲಾಗಿದೆ. ನಗರದ ಮೂರು ಪ್ರಮುಖ ದೇಗುಲಗಳನ್ನು ಟಾರ್ಗೆಟ್‌ ಮಾಡಿದ್ದ. ಮೊದಲು ಕದ್ರಿಯಲ್ಲಿರುವ ಮಂಜುನಾಥ ಸ್ವಾಮಿ ದೇಗುಲದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಬಾಂಬ್‌ ಸ್ಫೋಟಿಸುವುದು ಅವನ ಸಂಚಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಅಧಿಕೃತವಾಗಿ ಪೊಲೀಸರು ಇನ್ನೂ ಈ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಪೊಲೀಸರು ಎಲ್ಲ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಈ ಮೂರು ದೇವಾಲಯಗಳು ಮಾತ್ರವಲ್ಲದೆ ಮಂಗಳೂರಿನ ರೈಲು ನಿಲ್ದಾಣ, ಕೆಎಸ್​ಆರ್​ಟಿಸಿ ಬಸ್ ಸ್ಟ್ಯಾಂಡ್, ಮಂಗಳೂರಿನ ಸಂಘನಿಕೇತನದಲ್ಲಿಯೂ ಬಾಂಬ್‌ ಸ್ಫೋಟಿಸುವ ಯೋಜನೆ ಹೊಂದಿದ್ದ ಎನ್ನಲಾಗುತ್ತಿದೆ.
ಶಾರೀಕ್‌ಗೆ ಐಸಿಸ್‌ ಉಗ್ರ ಸಂಘಟನೆಯನ್ನು ಸೇರುವ ಆಸೆ ಇತ್ತು. ಇದಕ್ಕೆ ಅರ್ಹತೆ ಪಡೆಯಲು ಟ್ರಯಲ್‌ ರೂಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್‌ ಸ್ಫೋಟಿಸಲು ಮುಂದಾಗಿದ್ದ. ಇದಕ್ಕೆ ಸಂಬಂಧಪಟ್ಟಂತೆ ಹಲವರ ಸಂಪರ್ಕವನ್ನೂ ಮಾಡಿದ್ದ. ನೀನು ದೊಡ್ಡಮಟ್ಟದಲ್ಲಿ ಕೃತ್ಯ ಎಸಗಿದರೆ ಐಸಿಸ್‌ನವರು ನಿನ್ನನ್ನು ಗುರುತಿಸಬಹುದು ಎಂಬ ಸೂಚನೆ ದೊರಕಿ ಬಾಂಬ್‌ ಸ್ಫೋಟಕ್ಕೆ ಮುಂದಾಗಿದ್ದ ಎಂದು ವರದಿಗಳು ತಿಳಿಸಿವೆ.
ಕುಕ್ಕರ್‌ ಬಾಂಬ್ ಸ್ಫೋಟಕ್ಕೂ ಮುನ್ನ ಶಾರೀಕ್ ಜಿಹಾದ್ ಸಂಬಂಧಿ ವಿಡಿಯೋ ಮಾಡಿ ತನ್ನ ಹ್ಯಾಂಡ್ಲರ್​ಗಳಿಗೆ ಕಳುಹಿಸಿದ್ದ. ಕುಕ್ಕರ್ ಬಾಂಬ್ ಹಿಡಿದುಕೊಂಡು ತೆಗೆಸಿದ ಫೋಟೋವನ್ನೂ ಹ್ಯಾಂಡ್ಲರ್​ಗೆ ಕಳುಹಿಸಿದ್ದ. ಈತ ಕುಕ್ಕರ್‌ ಬಾಂಬ್‌ ಹಿಡಿದ ಫೋಟೊಗಳೂ ವೈರಲ್‌ ಆಗುತ್ತಿರುವುದು ಈ ಮಾಹಿತಿಗೆ ಪುಷ್ಟಿ ನೀಡುತ್ತಿದೆ.
ಶಾರೀಕ್‌ನ ಮೊಬೈಲ್‌ ಫೋನನ್ನು ಪೊಲೀಸರು ಟ್ರೇಸ್‌ ಮಾಡಿದ್ದಾರೆ. ಆದರೆ ಇದರಲ್ಲಿ ಪತ್ತೆಯಾದ ಅನೇಕ ಮೊಬೈಲ್‌ ಸಂಖ್ಯೆಗಳು ಸ್ವಿಚ್ಡ್‌ಆಫ್‌ ಆಗಿವೆ. ಈ ನಂಬರ್‌ಗಳ ಲೊಕೇಷನ್‌ಗಳು ತಮಿಳುನಾಡು, ಕೇರಳವನ್ನು ತೋರಿಸುತ್ತಿದ್ದು, ಈ ಜಾಲವು ದೇಶದ ವಿವಿಧೆಡೆ ಹಬ್ಬಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಶಾರೀಕ್‌ ಹುಟ್ಟೂರಿನಲ್ಲಿರುವ ಇಬ್ಬರು ಯುವಕರ ಮೇಲೂ ತನಿಖಾಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಈ ಸಂಚಿನ ಕುರಿತು ಅವರಿಗೂ ಮಾಹಿತಿ ಇರಬಹುದು ಎನ್ನಲಾಗಿದೆ. ಈ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here

Most Popular

error: Content is protected !!