Thursday, December 1, 2022
spot_img
Homeಸುದ್ದಿಕುಕ್ಕರ್‌ ಸ್ಫೋಟದ ಸಂಚು ಬಯಲಿಗೆಳೆಯುತ್ತೇವೆ : ಸುನಿಲ್‌ ಕುಮಾರ್‌

ಕುಕ್ಕರ್‌ ಸ್ಫೋಟದ ಸಂಚು ಬಯಲಿಗೆಳೆಯುತ್ತೇವೆ : ಸುನಿಲ್‌ ಕುಮಾರ್‌

ಸ್ಫೋಟ ಸಂಭವಿಸಿದ ಸ್ಥಳಕ್ಕೆ ಸಚಿವರ ಭೇಟಿ, ಪರಿಶೀಲನೆ

ಮಂಗಳೂರು: ಕಂಕನಾಡಿಯಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಹಿಂದೆ ಹಿಂದು ಸಮಾಜವನ್ನು ಗುರಿ ಮಾಡಿಕೊಳ್ಳುವ ಹುನ್ನಾರ ಇತ್ತು ಎನ್ನುವುದ ಸ್ಪಷ್ಟವಾಗಿದೆ. ರಾಷ್ಟ್ರೀಯ ಮತ್ತು ಜಾಗತಿಕ ಸಂಚಿನ ಗುಮಾನಿಯಿದೆ. ತನಿಖೆಯ ಹೊಣೆಯನ್ನು ಈಗಾಗಲೇ ‘ರಾಷ್ಟ್ರೀಯ ತನಿಖಾ ದಳ’ಕ್ಕೆ (ಎನ್‌ಐಎ) ಹಸ್ತಾಂತರಿಸಲಾಗಿದೆ. ಘಟನೆಯ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದರು.
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಸಂಘಟನೆಯನ್ನು ನಿಷೇಧಿಸುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ. ಉಗ್ರರ ಸಂಚುಗಳನ್ನು ವಿಫಲಗೊಳಿಸಲಾಗುತ್ತಿದೆ. ಹಿಂದೂಗಳನ್ನು ಟಾರ್ಗೆಟ್ ಮಾಡುವ ಅವರ ಪ್ರಯತ್ನ ವಿಫಲವಾಗಿದೆ. ತನಿಖೆ ದೃಷ್ಟಿಯಿಂದ ಗೃಹಸಚಿವರು ಮೊದಲು ಭೇಟಿ ನೀಡಿದ್ದಾರೆ ಎಂದು ಸ್ಫೋಟ ಸಂಭವಿಸಿದ ಮಂಗಳೂರಿನ ನಾಗುರಿಯಲ್ಲಿ ಸುನಿಲ್ ಕುಮಾರ್ ಹೇಳಿದರು.
ಮಂಗಳೂರಿನಲ್ಲಿ ಇಂದಲ್ಲ ನಾಳೆ ಎನ್​ಐಎ ಘಟಕ ಸ್ಥಾಪಿಸಲಾಗುವುದು. ಕೇಂದ್ರ ಸರ್ಕಾರವೂ ಈ ಬಗ್ಗೆ ಸಕಾರಾತ್ಮಕವಾಗಿ ಪರಿಶೀಲನೆ ನಡೆಸುತ್ತಿದೆ. ದೇಶದ ಯಾವುದೇ ಭಾಗದಲ್ಲಿ ಇಂಥ ವಾತಾವರಣ ಸೃಷ್ಟಿಯಾಗಬಾರದು. ಬಾಂಬ್ ಸ್ಪೋಟದ ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಭಯೋತ್ಪಾದನೆಯ ಆತಂಕವನ್ನು ಸರ್ಕಾರ ಸದೃಢವಾಗಿ ಎದುರಿಸುತ್ತಿದೆ. ಭಯೋತ್ಪಾದಕರ ಬಗ್ಗೆ ನಮ್ಮ ಸರ್ಕಾರ ಎಂದಿಗೂ ಮೃದು ಧೋರಣೆ ತಳೆದಿಲ್ಲ ಎಂದರು.
ಕದ್ರಿ ದೇವಸ್ಥಾನ, ಕೆಲವು ಕಚೇರಿ ಹಾಗೂ ಸಾರ್ವಜನಿಕ ಜಾಗಗಳನ್ನು ಉಗ್ರರು ಗುರಿಯಾಗಿಸಿದ್ದರು. ಹಿಂದೂ ಸಮಾಜವನ್ನು ಗುರಿಯಾಗಿಸಿ ದಾಳಿ ಮಾಡುವ ಅವರ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಇಂಥ ಮಾನಸಿಕತೆ ದೂರ ಆಗಬೇಕಿದೆ. ಈ ಬೆಳವಣಿಗೆಗಳನ್ನು ಹಗುರವಾಗಿ ಪರಿಗಣಿಸಲು ಆಗುವುದಿಲ್ಲ. ಈ ಘಟನೆಯನ್ನು ಎಲ್ಲರೂ ಖಂಡಿಸಬೇಕು. ಉಗ್ರರಿಗೆ ಸಹಕಾರ ಕೊಡುವವರ ಬಗ್ಗೆ ಎಲ್ಲರೂ ಎಚ್ಚರವಹಿಸಬೇಕು ಎಂದರು.
ನೆಟ್ಟಾರು ಘಟನೆ, ಎಸ್​ಡಿಪಿಐ ಉಪಟಳ ಸೇರಿದಂತೆ ಸಮಾಜದಲ್ಲಿ ಶಾಂತಿ ಕದಡುವ ಎಲ್ಲ ಪ್ರಯತ್ನಗಳನ್ನೂ ಜನರು ವಿರೋಧಿಸುತ್ತಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡ ಆಟೊ ಚಾಲಕ‌ನ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಲಾಗುವುದು ಎಂದು ತಿಳಿಸಿದರು. ಗಾಯಾಳು ಆಟೊ ಚಾಲಕ ಪುರುಷೋತ್ತಮ್ ಚಿಕಿತ್ಸೆ ಪಡೆಯುತ್ತಿರುವ ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿದ ನಾಗುರಿಗೆ ಅವರು ಭೇಟಿ ನೀಡಿ ಪರಿಶೀಲಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!