Thursday, December 1, 2022
spot_img
Homeಸುದ್ದಿಬ್ರಾಹ್ಮಣರ ಅವಹೇಳನ : ಸಿದ್ದರಾಮಯ್ಯ ವಿಷಾದ

ಬ್ರಾಹ್ಮಣರ ಅವಹೇಳನ : ಸಿದ್ದರಾಮಯ್ಯ ವಿಷಾದ

ಯಾರನ್ನೂ ಅವಮಾನಿಸುವ ಉದ್ದೇಶ ಹೊಂದಿಲ್ಲ ಎಂಬ ಸ್ಪಷ್ಟೀಕರಣ

ಬೆಂಗಳೂರು: ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಪ್ರಗತಿಪರ ಚಿಂತಕ ಪ. ಮಲ್ಲೇಶ್ ಅವರು ಬ್ರಾಹ್ಮಣರನ್ನು ಅವಹೇಳನ ಮಾಡಿರುವ ವಿಚಾರ ವಿವಾದಕ್ಕೊಳಗಾದ ಬಳಿಕ ಸಿದ್ದರಾಮಯ್ಯನವರು ನಾನು ಎಲ್ಲ ಸಮುದಾಯಗಳನ್ನು ಸಮಾನವಾಗಿ ಗೌರವಿಸುತ್ತೇನೆ ಮತ್ತು ಯಾರನ್ನೂ ಅವಮಾನಿಸುವಲ್ಲಿ ಎಂದಿಗೂ ತೊಡಗಿಲ್ಲ ಹಾಗೂ ಮುಂದೆಯೂ ತೊಡಗುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿ ತೇಪೆ ಹಚ್ಚಲು ಯತ್ನಿಸಿದ್ದಾರೆ.
ಸಿದ್ದರಾಮಯ್ಯ @75 ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಎದುರೇ ಬ್ರಾಹ್ಮಣ ಸಮುದಾಯದ ವಿರುದ್ಧ ಪ. ಮಲ್ಲೇಶ್ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದನ್ನು ಬ್ರಾಹ್ಮಣ ಸಮುದಾಯದವರು ತೀವ್ರವಾಗಿ ಪ್ರತಿಭಟಿಸಿದ್ದಾರೆ. ಈ ಹೇಳಿಕೆ ಚುನಾವಣೆಯಲ್ಲಿ ಹಾನಿ ಮಾಡುವ ಭೀತಿ ಕಾಣಿಸಿಕೊಂಡ ಬಳಿಕ ಕಾಂಗ್ರೆಸ್‌ ನಾಯಕರು ಸಿದ್ದರಾಮಯ್ಯನವರಿಂದ ಸ್ಪಷ್ಟೀಕರಣ ಕೇಳಿದ್ದರು.
ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡುವಂತೆ ಮತ್ತು ಮುಂದುವರಿಸದಂತೆ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಹಾಗೂ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರನ್ನು ಸಿದ್ದರಾಮಯ್ಯ ಕೋರಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತರಾಗಿರುವ ಪ.ಮಲ್ಲೇಶ್ ಕೂಡ, ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಮೈಸೂರು ಜಿಲ್ಲಾ ಬ್ರಾಹ್ಮಣರ ಸಂಘ ಸಿದ್ದರಾಮಯ್ಯ ಮತ್ತು ಮಲ್ಲೇಶ್‌ ವಿರುದ್ಧ ದೂರು ದಾಖಲಿಸಿತ್ತು. ಮೈಸೂರಿನಲ್ಲಿ ‘ಸಿದ್ದರಾಮಯ್ಯ@75’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಮಲ್ಲೇಶ್, ‘ಯಾವುದೇ ಸಂದರ್ಭದಲ್ಲೂ ಜನರು ಬ್ರಾಹ್ಮಣರು ಮತ್ತು ಬ್ರಾಹ್ಮಣ್ಯವನ್ನು ನಂಬಬಾರದು. ವೇದಗಳು ಮತ್ತು ಉಪನಿಷತ್ತುಗಳು ಈ ದೇಶವನ್ನು ನಾಶಪಡಿಸಿವೆ. ಜನರು ಬುದ್ಧನನ್ನು ಅನುಸರಿಸಬೇಕು, ನಾವೆಲ್ಲರೂ ಬುದ್ಧನನ್ನು ನಮ್ಮ ಪರವಾಗಿ ಹೊಂದಿದ್ದೇವೆ’. ಮೀಸಲಾತಿಯ ಗರಿಷ್ಠ ಮಿತಿಯನ್ನು ಶೇ. 50 ರಿಂದ 60ಕ್ಕೆ ಹೆಚ್ಚಿಸುವ ಹಿಂದೆ ಬ್ರಾಹ್ಮಣರು ಇದ್ದಾರೆ ಎಂದು ಹೇಳಿದ್ದರು.
ಈ ವೇಳೆ ವೇದಿಕೆಯಲ್ಲಿದ್ದ ಸಿದ್ದರಾಮಯ್ಯ ಅವರು ಈ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದರು. ವಿಷಯ ವಿವಾದಕ್ಕೆ ತಿರುಗಿದ ಬಳಿಕ, ಸಿದ್ದರಾಮಯ್ಯ ಅವರು ವೇದಿಕೆಯಲ್ಲಿದ್ದರೂ ಕೂಡ ಪ.ಮಲ್ಲೇಶ್ ಅವರು ಹೇಳಿದ್ದನ್ನು ಕೇಳಿಸಿಕೊಂಡಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!