ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಈ ಸಂಘಟನೆಯ ಹೆಸರು
ಮಂಗಳೂರು : ಮಂಗಳೂರಿನ ನಾಗುರಿಯಲ್ಲಿ ನ.19ರಂದು ಸಂಭವಿಸಿದ ಆಟೋರಿಕ್ಷಾ ಸ್ಫೋಟ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಸಂಘಟನೆಯ ಕೃತ್ಯವೇ? ಹೀಗೊಂದು ಪ್ರಶ್ನೆ ಮೂಡಲು ಕಾರಣವಾಗಿರುವುದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟ್. ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಮುಸ್ಲಿಮರ ಸಂಘಟನೆ ಈ ಕೃತ್ಯ ಎಸಗಿರುವುದು ತಾನು ಎಂಬುದಾಗಿ ಹೇಳಿಕೊಂಡಿದೆ ಎಂಬ ಪೋಸ್ಟ್ ಹರಿದಾಡಿ ವೈರಲ್ ಆಗಿದೆ.
ಇದೀಗ ಈ ಅಂಶ ಬೆಳಕಿಗೆ ಬಂದ ಬಳಿಕ ಪೊಲೀಸರು ಈ ನಿಟ್ಟಿನಲ್ಲೂ ತನಿಖೆಗೆ ಮುಂದಾಗಿದ್ದಾರೆ. ಉಲ್ಲೇಖಿಸಿದ ಅಂಶದ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕದ್ರಿ ದೇವಸ್ಥಾನದ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಲಾಗಿತ್ತು ಎಂದು ಅಂಶವೂ ಈ ಪೋಸಸ್ಟ್‌ನಲ್ಲಿದೆ. ಪೋಸ್ಟ್ ಅನ್ನು ಸಂಪೂರ್ಣವಾಗಿ ಬಿಡುಗಡೆ ಮಾಡದೆ ಕತ್ತರಿಸಿರುವುದರಿಂದ ಉಳಿದ ಅಂಶಗಳು ಗೊತ್ತಾಗುತ್ತಿಲ್ಲ. ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಿದ ಬೆನ್ನಲ್ಲೇ ಇಂಥದೊಂದು ಬೆಳವಣಿಗೆ ನಡೆದಿದೆ.
ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣವನ್ನು ಬುಧವಾರ ಅಧಿಕೃತವಾಗಿ ರಾಷ್ಟ್ರೀಯ ತನಿಖಾ ತಂಡ(ಎನ್ಐಎ)ಕ್ಕೆ ಹಸ್ತಾಂತರಿಸಲಾಗಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ತಿಳಿಸಿದ್ದರು. ಯುಎಪಿಎಗೆ ಸಂಬಂಧಿಸಿದ ಯಾವುದೇ ಪ್ರಕರಣವಾಗಿದ್ದರೂ ಅದನ್ನು ಎನ್ಐಎ ತಂಡಕ್ಕೆ ಹಸ್ತಾಂತರ ಮಾಡಲಾಗುತ್ತದೆ. ನಿನ್ನೆ ಸಂಜೆಯೇ ನಾವು ಮಂಗಳೂರು ಆಟೋರಿಕ್ಷಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಎನ್ಐಎ ತಂಡಕ್ಕೆ ರವಾನಿಸಿದ್ದೇವೆ. ಅದನ್ನು ಇಂದು ಕೇಂದ್ರ ಗೃಹ ಸಚಿವಾಲಯಕ್ಕೆ ತಲುಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣವೂ ಸೇರಿದಂತೆ ಇಂಥ ಪ್ರಕರಣಗಳಲ್ಲಿ ಆರಂಭದಿಂದಲೂ ಕೇಂದ್ರೀಯ ತನಿಖಾ ತಂಡಗಳು ವಿಚಾರಣೆಯಲ್ಲಿ ಪೊಲೀಸರ ಜತೆಗೆ ಕೈ ಜೋಡಿಸುತ್ತವೆ. ಸೂಕ್ಷ್ಮ ಅಂಶಗಳನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ತನಿಖೆಯನ್ನು ನಡೆಸುತ್ತವೆ. ಆದರೆ ಈಗ ಅಧಿಕೃತವಾಗಿ ಎನ್ಐಎ ತಂಡಕ್ಕೆ ಈ ಪ್ರಕರಣವನ್ನು ಹಸ್ತಾಂತರ ಮಾಡಲಾಗುತ್ತಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ.