ನಾಯಕರ ಹೇಳಿಕೆಗಳ ಭರಾಟೆ
ಬೆಂಗಳೂರು : ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿವಿವಾದ ಮತ್ತೆ ತಾರಕಕ್ಕೇರಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬೆಳಗಾವಿ ಮತ್ತು ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಪ್ರಚೋದನಕಾರಿಯಾಗಿ ಮಾತನಾಡಿದ ಬಳಿಕ ವಿವಾದದ ಕಾವು ತೀವ್ರಗೊಂಡಿದ್ದು, ರಾಜ್ಯದ ನಾಯಕರೂ ಅಷ್ಟೇ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ಕನಸು ಎಂದೂ ನನಸಾಗುವುದಿಲ್ಲ. ನಾಡಿನ ನೆಲ, ಜಲ, ಗಡಿ ರಕ್ಷಣೆ ವಿಚಾರದಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬೊಮ್ಮಾಯಿ, ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಒಂದಿಂಚೂ ಜಾಗವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರದಲ್ಲಿರುವ ಕನ್ನಡ ಭಾಷಿಕ ಪ್ರದೇಶಗಳಾದ ಸೊಲ್ಲಾಪುರ, ಅಕ್ಕಲಕೋಟೆ ಕರ್ನಾಟಕಕ್ಕೆ ಸೇರಬೇಕೆನ್ನುವುದು ನಮ್ಮ ಆಗ್ರಹ ಎಂದಿದ್ದಾರೆ.
ಮಹಾರಾಷ್ಟ್ರ ಸರ್ಕಾರ 2004ರಿಂದಲೂ ಗಡಿ ಕ್ಯಾತೆ ತೆಗೆದು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದೆ. ಇದುವರೆಗೂ ಯಶಸ್ವಿಯಾಗಿಲ್ಲ. ಮುಂದೆಯೂ ಆಗುವುದಿಲ್ಲ. ನಾವು ನಮ್ಮ ಕಾನೂನು ಹೋರಾಟವನ್ನು ಪ್ರಬಲವಾಗಿ ಮಾಡಲು ಸನ್ನದ್ದರಾಗಿದ್ದೇವೆ ಎಂದಿದ್ದಾರೆ.
ಮಹಾರಾಷ್ಟ್ರದ ಯಾವುದೇ ಗ್ರಾಮ ಕರ್ನಾಟಕದೊಂದಿಗೆ ವಿಲೀನಗೊಳ್ಳಲು ಬಯಸಿಲ್ಲ ಮತ್ತು ಯಾವುದೇ ಗಡಿ ಗ್ರಾಮವು ಎಲ್ಲಿಯೂ ಹೋಗುವ ಪ್ರಶ್ನೆಯೇ ಇಲ್ಲ.ಬೆಳಗಾವಿಯ ಕೆಲವು ಭಾಗ ಮತ್ತು ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಬೊಮ್ಮಾಯಿ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳು ಕರ್ನಾಟಕದೊಂದಿಗೆ ವಿಲೀನಗೊಳಿಸಲು ಈ ಹಿಂದೆ ನಿರ್ಣಯ ಅಂಗೀಕರಿಸಿದ್ದೆವು ಎಂದಿದ್ದಾರೆ.
ಗಡಿವಿವಾದಗಳನ್ನು ಬಗೆಹರಿಸಲು ಅತ್ಯಂತ ಬಲಿಷ್ಠವಾಗಿರುವ ಹಿರಿಯ ವಕೀಲರ ತಂಡವನ್ನು ರಚನೆ ಮಾಡಲಾಗಿದೆ. ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಶ್ಯಾಮ್ ದಿವಾನ್ ಹಾಗೂ ಕರ್ನಾಟಕದ ಹಿರಿಯ ವಕೀಲರಾದ ಉದಯ್ ಹೊಳ್ಳ, ಬೆಳಗಾವಿಯ ಮಾರುತಿ ಜಿರ್ಲೆ, ವಕೀಲರಾದ ರಘುಪತಿ ಅವರನ್ನೊಳಗೊಂಡ ತಂಡವನ್ನ ರಚಿಸಲಾಗಿದೆ ಎಂಡು ಬೊಮ್ಮಾಯಿ ತಿಳಿಸಿದ್ದಾರೆ.