Thursday, December 1, 2022
spot_img
Homeಅಂಕಣಕಾನೂನು ಕಣಜ - ಪೋಲಿಸ್ ಆಡಳಿತದ ವ್ಯವಸ್ಥೆ

ಕಾನೂನು ಕಣಜ – ಪೋಲಿಸ್ ಆಡಳಿತದ ವ್ಯವಸ್ಥೆ

ಸಾರ್ವಜನಿಕ ಅಶಾಂತಿ, ಘರ್ಷಣೆ ಅಥವಾ ಗಲಭೆಗೆ ಕಾರಣ ಉಂಟು ಮಾಡಬಹುದಾದ ಯಾವುದೇ ಅಪರಾಧದ ಕೃತ್ಯದ ಬಗ್ಗೆ ಮಾಹಿತಿಯನ್ನು ತಕ್ಷಣವಾಗಿ ಪೋಲಿಸ್ ಇಲಾಖೆಗೆ ತಿಳಿಸಬೇಕಾಗಿರುವುದು ಪ್ರತಿಯೊಬ್ಬ ನಾಗರಿಕನ ಆದ್ಯ
ಕರ್ತವ್ಯವಾಗಿರುತ್ತದೆ. ಯಾವುದೇ ವ್ಯಕ್ತಿ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಿ ಫಿರ್ಯಾದು/ ದೂರು ನೀಡಿದಾಗ ಸಂಬಂಧಪಟ್ಟ ಠಾಣಾಧಿಕಾರಿಯು ಆತನಿಗೆ ಸ್ವೀಕೃತಿ ಪತ್ರ ನೀಡಬೇಕಾಗಿರುವುದು ಮತ್ತು ಈ ಬಗ್ಗೆ ತಾನು ತೆಗೆದುಕೊಂಡ
ಕ್ರಮದ ಬಗ್ಗೆ ಆತನಿಗೆ ತಿಳಿಸಿ ಹಿಂಬರಹವನ್ನು ನೀಡಬೇಕಾಗಿರುವುದು ಪೊಲೀಸ್ ಇಲಾಖೆಯ ಸುತ್ತೋಲೆ ಪ್ರಕಾರದ ಕಡ್ಡಾಯವಾದ ನಿಯಮವಾಗಿರುತ್ತದೆ.
ಪೋಲಿಸ್ ಠಾಣೆಯ ವ್ಯಾಪ್ತಿಯೊಳಗಿನ ಪ್ರತಿಯೊಂದು ಗ್ರಾಮಕ್ಕೆ ನಿಯೋಜಿತ ಪೊಲೀಸ್ ಸಿಬ್ಬಂದಿ ಬೇಟಿ ನೀಡಿ ಗ್ರಾಮದ ನಾಗರಿಕನನ್ನು ಅದರಲ್ಲೂ ವಿಷೇಷವಾಗಿ ಹಿರಿಯ ನಾಗರಿಕನನ್ನು ಮತ್ತು ಗ್ರಾಮದ ಪ್ರಮುಖರನ್ನು ಬೇಟಿಯಾಗಿ ಅಲ್ಲಿನ ಸಾರ್ವಜನಿಕ ಶಾಂತಿ ಮತ್ತು ಸುರಕ್ಷೆಯ ವಿಚಾರದಲ್ಲಿನ ಕುಂದುಕೊರತೆಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದು ತನ್ನ ಮೇಲಾಧಿಕಾರಿಗೆ ಮಾಡಬೇಕಾಗುತ್ತದೆ. ಪ್ರತಿಯೊಂದು ಪೊಲೀಸ್ ಠಾಣೆಯ ಸರಹದ್ದಿನಲ್ಲಿ ನಾಗರಿಕ ಸಮಿತಿಯನ್ನು ರಚಿಸಿ ಸಾರ್ವಜನಿಕ ವಲಯದ ಪ್ರಮುಖ ವ್ಯಕ್ತಿಗಳನ್ನು ಈ ಸಮಿತಿಯಲ್ಲಿ ಸದಸ್ಯರನ್ನಾಗಿಸಿ ನಾಗರಿಕ ಸಮಿತಿ ಸಭೆಗಳನ್ನು ಆಯಾಯ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಕಾಲಕಾಲಕ್ಕೆ ನಡೆಸಬೇಕಾಗಿರುವ ಜವಾಬ್ದಾರಿಯು ಪೊಲೀಸ್ ಠಾಣೆಯ
ಠಾಣಾಧಿಕಾರಿಯ ಮೇಲಿರುತ್ತದೆ. ಈ ಸಂಧರ್ಭದಲ್ಲಿ ಕುಂದು ಕೊರತೆಗಳನ್ನು, ದೂರುಗಳನ್ನು ಮತ್ತು ಸಲಹೆಗಳನ್ನು ಪೋಲಿಸರು ನಿಗದಿತ ರಿಜಿಸ್ಟರ್‍ನಲ್ಲಿ ನಮೂದಿಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಾಗಿರುವುದು ಪೋಲಿಸರ
ಕರ್ತವ್ಯವಾಗಿರುತ್ತದೆ. ಪೊಲೀಸ್ ಅಧಿಕಾರಿಗಳು ಪ್ರತಿ ತಿಂಗಳ ಕೊನೆಯ ಭಾನುವಾರ ಪೋಲಿಸ್ ಠಾಣೆಗೆ ದಲಿತ ಪ್ರತಿನಿಧಿಗಳನ್ನು ಆಹ್ವಾನಿಸಿ ಅವರ ದೂರುಗಳನ್ನು ಕೇಳಬೇಕಾಗುತ್ತದೆ ಮತ್ತು ಈ ಬಗ್ಗೆ ಪೋಲಿಸ್ ಠಾಣೆಯಲ್ಲಿನ ಪ್ರತ್ಯೇಕ ರಿಜಿಸ್ಟರ್‍ನಲ್ಲಿ ಸಭೆಯಲ್ಲಿ ಚರ್ಚಿಸಿದ ದೂರುಗಳನ್ನು ನಮೂದಿಸಿ ಸಮಸ್ಯೆಯನ್ನು ನಿವಾರಿಸಲು ಬೇಕಾಗುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳ ಬೇಕಾಗುತ್ತದೆ.
ಮಕ್ಕಳ ಸಹಾಯವಾಣಿ, ವನಿತಾ ಸಹಾಯವಾಣಿ ಮತ್ತು ಹಿರಿಯ ನಾಗರಿಕ ಸಹಾಯದ ಘಟಕಗಳು ಪ್ರತಿಯೊಂದು ಪೋಲಿಸ್ ಜಿಲ್ಲಾ ಹಾಗೂ ಆಯುಕ್ತರ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತವೆ. ಸಾರ್ವಜನಿಕರು ಸಂಬಂಧಪಟ್ಟ ಪರಿಸ್ಥಿತಿಗೆ ಅನುಗುಣವಾಗಿ ಸದರಿ ಸಹಾಯವಾಣಿಗಳನ್ನು ಸಂಪರ್ಕಿಸಬಹುದಾಗಿದೆ ಮತ್ತು ಈ ಸಹಾಯ ವಾಣಿಯನ್ನು ನೋಡಿಕೊಳ್ಳುವ ಪೊಲೀಸ್ ಅಧಿಕಾರಿಗಳು ಸೂಕ್ತ ಸಹಾಯವನ್ನು ನೀಡಬೇಕಾಗುತ್ತದೆ. ಪೊಲೀಸ್ ಇಲಾಖೆಯ ಪೊಲೀಸ್ ನಿಯಂತ್ರಣ ಕೊಠಡಿ ದಿನದ 24 ಗಂಟೆಯೂ ಸತತವಾಗಿ ಕಾರ್ಯ ನಿರ್ವಹಿಸುತ್ತಿದ್ದು ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ತುರ್ತು ಪೊಲೀಸ್ ಸಹಾಯಕ್ಕಾಗಿ ದೂರವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದಾಗಿದೆ.

ಕೆ. ವಿಜೇಂದ್ರ ಕುಮಾರ್, ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

LEAVE A REPLY

Please enter your comment!
Please enter your name here

Most Popular

error: Content is protected !!