Saturday, December 10, 2022
spot_img
Homeಹೆಬ್ರಿ ಸುದ್ದಿಕೃಷಿ ಭೂಮಿಗೆ ಕಾಡುಪ್ರಾಣಿಗಳ ಲಗ್ಗೆ : ಸಂಕಷ್ಟದಲ್ಲಿ ರೈತರು

ಕೃಷಿ ಭೂಮಿಗೆ ಕಾಡುಪ್ರಾಣಿಗಳ ಲಗ್ಗೆ : ಸಂಕಷ್ಟದಲ್ಲಿ ರೈತರು

ರೂ.3 ಲಕ್ಷ ಪರಿಹಾರ ನೀಡಿ ಇಲ್ಲವೇ ರೈತರಿಗೆ ಬಂದೂಕು ಲೈಸನ್ಸ್‌ ನೀಡಿ – ಮುನಿಯಾಲು ಗೋಪಾಲ ಕುಲಾಲ್

ಹೆಬ್ರಿ : ಅಡಿಕೆ, ತೆಂಗು, ಬಾಳೆ ಸಹಿತ ರೈತರು ಕಷ್ಟಪಟ್ಟು ಬೆಳೆಸಿದ ಕೃಷಿ ತೋಟಗಳಿಗೆ ಕಾಡುಪ್ರಾಣಿಗಳು ನಿತ್ಯವೂ ಎಂಬಂತೆ ಹಿಂಡು ಹಿಂಡಾಗಿ ಲಗ್ಗೆ ಇಟ್ಟು ಅಪಾರ ಪ್ರಮಾಣದಲ್ಲಿ ಕೃಷಿಯನ್ನು ಹಾಳು ಮಾಡುತ್ತಿವೆ. ಬೆಳೆದ ಬೆಳೆ ನಾಶವಾಗಿ ರೈತರು ತೀರಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ ಸರಕಾರ ಈ ಕುರಿತಾಗಿ ಯಾವುದೇ ರೀತಿಯಾದ ಪರಿಹಾರ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾದರೆ ಕೃಷಿಕರು, ರೈತರ ಜೀವನವಾದರೂ ಹೇಗೆ? ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಮುನಿಯಾಲು ಗೋಪಾಲ ಕುಲಾಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಗಳ ದಾಳಿ:
ಮಂಗಗಳು ನಿರಂತರವಾಗಿ ಹಿಂಡು ಹಿಂಡಾಗಿ ದಾಳಿ ಮಾಡುತ್ತಿದೆ. 1 ಮಂಗ ದಿನಕ್ಕೆ 5 ಸಿಯಾಳ ಕುಡಿಯುತ್ತದೆ. ರೈತರು ಸಿಯಾಳ ಅಂಗಡಿಗೆ ಮಾರಾಟ ಮಾಡಿದಾಗ ಖರೀದಿಸುವುದು 20ರಿಂದ 25 ರೂ. ಮಂಗ ಕುಡಿದ 5ಸಿಯಾಳದ ಬೆಲೆ 100 ರಿಂದ 125. ಪ್ರತಿನಿತ್ಯ ಈ ಪ್ರಮಾಣದಲ್ಲಿ ಮಂಗಗಳು ಸಿಯಾಳ ಕುಡಿದರೇ ಬೆಳೆಗಾರರಿಗೆ ಏನು ದೊರೆಯುತ್ತದೆ. ಅಲ್ಲದೆ ಅವುಗಳು ಅಡಿಕೆ, ಬಾಳೆ, ತರಕಾರಿ, ಭತ್ತ ಬೆಳೆಗೂ ಹಾನಿ ಮಾಡುತ್ತಿವೆ. ಇನ್ನೂ ಜಿಂಕೆ, ಕಡವೆಗಳು ಬೇಸಾಯಕ್ಕಾಗಿ ಸಿದ್ಧ ಮಾಡಿರುವ ನೇಜಿ, ದನಗಳಿಗೆ ಮೇಯುವಿಗಾಗಿ ಬೆಳೆಸಿರುವ ಹುಲ್ಲು, ಬೆಳೆದ ಭತ್ತದ ಪೈರುಗಳನ್ನು ನಾಶ ಮಾಡುತ್ತಿದೆ. ಕಾಡುಕೋಣಗಳು ಕೃಷಿ ಭೂಮಿಯನ್ನು ದೊಡ್ಡ ಪ್ರಮಾಣದಲ್ಲಿ ಹಾನಿ ಮಾಡುತ್ತಿದೆ. ಇವುಗಳು ತಿಂದು ಹಾಳು ಮಾಡುವುದಕ್ಕಿಂತ ಅಧಿಕವಾಗಿ ಭತ್ತ, ಅಡಿಕೆ, ಬಾಳೆ, ತೆಂಗಿನ ಸಸಿಗಳನ್ನು ತುಳಿದು ಹಾಳು ಮಾಡುತ್ತಿದೆ. ಇತ್ತೀಚೆಗೆ ಚಿರತೆ ಹುಲಿಗಳು ಕೂಡ ಅಲ್ಲಲ್ಲಿ ಹೆಚ್ಚಾಗಿ ಕಾಣಲು ಸಿಗುತ್ತಿವೆ. ಸಾಕುನಾಯಿ, ದನಕರುಗಳನ್ನು ಹಿಡಿದು ತಿನ್ನುತ್ತಿವೆ. ಮನುಷ್ಯರಿಗೂ ದಾಳಿ ಮಾಡುವ ಭೀತಿಯಿದೆ. ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನವಿಲುಗಳ ಕಾಟ
ನವಿಗಳು ಗುಂಪು ಗುಂಪಾಗಿ ಬಂದು ತರಕಾರಿ, ಹೂವು, ಬೆಳೆದ ಸಸಿಗಳನ್ನು ನಾಶ ಮಾಡುತ್ತಿವೆ. ಒಟ್ಟಿನಲ್ಲಿ ಕಾಡು ಪ್ರಾಣಿ ಪಕ್ಷಿಗಳ ದಾಳಿಯಿಂದ ರೈತರು ಕೃಷಿ ಮಾಡಿ ಬದುಕುವುದೇ ಕಷ್ಟವಾಗಿದೆ. ಲಕ್ಷಾಂತರ ರೂ. ಸಾಲ ಮಾಡಿ ಮಾಡಿದ ಕೃಷಿ ವಿಪರೀತ ಮಳೆಯಿಂದ ನಷ್ಟವಾದರೆ ಇನ್ನೊಂದಡೆ ಈ ಕಾಡು ಪ್ರಾಣಿಗಳ ಸಮಸ್ಯೆ. ಅಲ್ಲದೆ ಬೆಲೆ ಏರಿಕೆಯಿಂದ ಇನ್ನಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಒಟ್ಟಾರೆಯಾಗಿ ಈ ರೀತಿಯ ಸಮಸ್ಯೆಗಳಿಂದ ಬೆಳೆದ ಬೆಳೆಯ ಫಲ ರೈತರ ಕೈಗೆ ಸಿಗುತ್ತಿಲ್ಲ. ಈ ರೀತಿಯಾದರೆ ಸಾಲ ಮರುಪಾವತಿ ಮಾಡುವುದು ಹೇಗೆ ಎಂದಿದ್ದಾರೆ. ಸರಕಾರ ರೈತರ ಸಮಸ್ಯೆಯನ್ನು ವಿಶೇಷವಾಗಿ ಮನಗಂಡು, ರೈತ ಮುಖಂಡರಲ್ಲಿ ಚರ್ಚೆ ಮಾಡಿ ಸೂಕ್ತ ಪರಿಹಾರ ನೀಡುವ ಯೋಜನೆ ರೂಪಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಎಕರೆಗೆ 3 ಲಕ್ಷ ಪರಿಹಾರ ನೀಡಿ ಇಲ್ಲವೇ ಬಂದೂಕು ಲೈಸನ್ಸ್‌ ಕೊಡಿ
ರೈತರ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಕಾಡುಪ್ರಾಣಿಗಳಿಂದ ಬೆಳೆ ನಾಶ ಸಹಿತ ರೈತರ ಸಂಕಷ್ಟಗಳ ಸಮೀಕ್ಷೆ ನಡೆಸಿ ಪ್ರತೀ ರೈತರಿಗೂ ಎಕರೆಗೆ 3 ಲಕ್ಷ ರೂ. ಪರಿಹಾರ ನೀಡಬೇಕು. ಇಲ್ಲವಾದಲ್ಲಿ ರೈತರೆಲ್ಲರಿಗೂ ಯಾವುದೇ ಷರತ್ತುಗಳಿಲ್ಲದೆ ಬಂದೂಕು ಪರವಾನಿಗೆ ಶೀಘ್ರವಾಗಿ ನೀಡಬೇಕು. ನಾವೇ ಕಾಡುಪ್ರಾಣಿಗಳನ್ನು ಬಂದೂಕು ತೋರಿಸಿ ಬೆದರಿಸಿ ಕೃಷಿ ಮಾಡಿಕೊಂಡು ಬದುಕುತ್ತೇವೆ. ರೈತರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ ಜಿಲ್ಲೆಯಲ್ಲಿ ಎಲ್ಲರೂ ಸೇರಿ ದೊಡ್ಡಮಟ್ಟದ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!