Thursday, December 1, 2022
spot_img
Homeಸುದ್ದಿದಿಶಾ ಸಾಲ್ಯಾನ್‌ ಸಾವು ಆಕಸ್ಮಿಕ

ದಿಶಾ ಸಾಲ್ಯಾನ್‌ ಸಾವು ಆಕಸ್ಮಿಕ

ಸುದೀರ್ಘ ತನಿಖೆ ಬಳಿಕ ಸಿಬಿಐ ತೀರ್ಮಾನ

ಮುಂಬಯಿ : ಬಾಲಿವುಡ್‌ನ ಟ್ಯಾಲೆಂಟ್ ಮ್ಯಾನೇಜರ್ ದಿಶಾ ಸಾಲ್ಯಾನ್ (28) ಸಾವು ಆಕಸ್ಮಿಕ ಎಂದು ಸಿಬಿಐ ತೀರ್ಮಾನಿಸಿದೆ. ಸಿಬಿಐ ತಂಡ ದಿಶಾ ಸಾವಿನ ಬಗ್ಗೆ ಪ್ರತ್ಯೇಕ ಪ್ರಥಮ ಮಾಹಿತಿ ವರದಿಯನ್ನು ಸಲ್ಲಿಸಿಲ್ಲವಾದರೂ, ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದೆ.
2020ರ ಜೂನ್ 8-9ರ ಮಧ್ಯರಾತ್ರಿ ಮುಂಬಯಿಯ ಉಪನಗರದ ಮಲಾಡ್‌ನಲ್ಲಿರುವ ಗ್ಯಾಲಕ್ಸಿ ರೀಜೆಂಟ್ ಕಟ್ಟಡದ 14ನೇ ಮಹಡಿಯಿಂದ ದಿಶಾ ಸಾಲ್ಯಾನ್‌ ಬಿದ್ದು ಮೃತಪಟ್ಟಿದ್ದಾರೆ. ಸುಶಾಂತ್‌ ಮೃತದೇಹ ಬಾಂದ್ರಾದಲ್ಲಿನ ಅವರ ಬಾಡಿಗೆ ನಿವಾಸದಲ್ಲಿ ಜೂನ್ 14 ರಂದು ಪತ್ತೆಯಾಗುವ ಐದು ದಿನಗಳ ಮೊದಲು ದಿಶಾ ಸಾವನ್ನಪ್ಪಿದ್ದರು.
ದಿಶಾ ಸಾಲ್ಯಾನ್ ವಿಷಯದಲ್ಲಿ ಗಂಭೀರ ಆರೋಪಗಳನ್ನು ಹೊರಿಸಲಾಗಿದ್ದು ಎರಡು ಸಾವುಗಳ ಮಧ್ಯೆ ಸಂಬಂಧವಿದೆ ಎಂದು ಹೇಳಲಾಗಿತ್ತು. ಕೆಲ ವರ್ಷದ ಹಿಂದೆ ದಿಶಾ ಸಾಲ್ಯಾನ್‌, ರಜಪೂತ್ ಸೆಕ್ರೆಟರಿಯಾಗಿ ಕೆಲಸ ಮಾಡಿದ್ದರಿಂದ ಆಕೆಯ ಸಾವಿನ ಬಗ್ಗೆ ಕುತೂಹಲ ಕೆರಳಿತ್ತು.
ದಿಶಾ ಹುಟ್ಟುಹಬ್ಬದ ಮೊದಲು ತನ್ನ ನಿವಾಸದಲ್ಲಿ ಗೆಟ್-ಟುಗೆದರ್ ಆಯೋಜಿಸುತ್ತಿದ್ದರು. ಜೂನ್ 8ರ ರಾತ್ರಿ ನಡೆದ ಪಾರ್ಟಿ ಅದರ ಒಂದು ಭಾಗವಾಗಿತ್ತು. ಆದರೆ, ಆ ರಾತ್ರಿ ಮದ್ಯ ಸೇವಿಸಿದ್ದ ದಿಶಾ ಸಮತೋಲನ ಕಳೆದುಕೊಂಡು ಫ್ಲಾಟ್‌ನ ಪ್ಯಾರಾಪೆಟ್‌ನಿಂದ ಜಾರಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಬ್ರಾಂಡ್-ಬಿಲ್ಡಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಚಾಟ್‌ಗಳನ್ನು ಹೊರತುಪಡಿಸಿ, ದಿಶಾ ಮತ್ತು ರಜಪೂತ್ ನಡುವೆ ಹೆಚ್ಚಿನ ಸಂಬಂಧ ಕಂಡುಬಂದಿಲ್ಲ. ದಿಶಾ ಸಾವು ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಯನ್ನು ಪ್ರಚೋದಿಸಿತು ಎಂದು ತೋರಿಸಲು ಯಾವುದೇ ಸಾಕ್ಷ್ಯಗಳಿಲ್ಲ. ಅವು ಎರಡು ವಿಭಿನ್ನ ಘಟನೆಗಳಾಗಿವೆ ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!