Thursday, December 1, 2022
spot_img
Homeಸ್ಥಳೀಯ ಸುದ್ದಿಪರಶುರಾಮ ಪ್ರತಿಮೆ ಲೋಕಾರ್ಪಣೆಯ ಪೂರ್ವಭಾವಿ ಸಭೆ

ಪರಶುರಾಮ ಪ್ರತಿಮೆ ಲೋಕಾರ್ಪಣೆಯ ಪೂರ್ವಭಾವಿ ಸಭೆ

ಕಾರ್ಕಳ ಪ್ರವಾಸೋದ್ಯಮದ ಬ್ರಾಂಡ್ – ವಿ. ಸುನೀಲ್ ಕುಮಾರ್

ಕಾರ್ಕಳ : ಶ್ರೀ ವೆಂಕಟರಮಣ ದೇವಸ್ಥಾನ, ಗೊಮ್ಮಟ ಬೆಟ್ಟ, ಅತ್ತೂರು ಚರ್ಚ್‌, ಕೋಟಿ ಚೆನ್ನಯ ಥೀಮ್‌ ಪಾರ್ಕ್‌, ಹೆಬ್ರಿಯ ಕೂಡ್ಲು ಪಾಲ್ಸ್‌ ಹೀಗೆ ಹಲವಾರು ಪ್ರವಾಸಿ ತಾಣಗಳಿದ್ದು, ಕಾರ್ಕಳದ ಪ್ರವಾಸಿ ಸ್ಥಳಗಳ ಸಾಲಿಗೆ ಸೇರಲಿರುವ ಪರಶುರಾಮ ಥೀಮ್‌ ಪಾರ್ಕ್‌ ನಿರ್ಮಾಣಗೊಳ್ಳುತ್ತಿದೆ. ಪ್ರವಾಸಿಗರಿಗೆ ಆನಂದ ನೀಡುವಂತಹ ಸ್ಥಳ ಕಾರ್ಕಳ ಆಗಬೇಕು. ಪರಶುರಾಮ ಥೀಮ್‌ ಪಾರ್ಕ್‌ ಕಾರ್ಕಳದ ಪ್ರವಾಸೋದ್ಯಮ ಬ್ರಾಂಡ್‌ ಆಗಲಿದೆ ಎಂದು ಇಂಧನ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ ಕುಮಾರ್‌ ತಿಳಿಸಿದರು.

ಅವರು ನ. 23ರಂದು ಬೈಲೂರಿನಲ್ಲಿ ನಡೆದ ಪರಶುರಾಮ ಥೀಮ್‌ ಪಾರ್ಕ್‌ ನಿರ್ಮಾಣದ ಪೂರ್ವಭಾವಿಯಲ್ಲಿ ಸಭೆಯನ್ನುದ್ಧೇಶಿಸಿ ಮಾತನಾಡಿದರು. ಸ್ವರ್ಣ ಕಾರ್ಕಳದ ಪರಿಕಲ್ಪನೆಯಲ್ಲಿ ನಿರ್ಮಾಣವಾಗುತ್ತಿರುವ ಈ ಥೀಮ್‌ ಪಾರ್ಕಿನ ಕೆಲಸ ಡಿಸೆಂಬರ್‌ 19ಕ್ಕೆ ಕೊನೆಗೊಳ್ಳುವುದಿಲ್ಲ ಬದಲಾಗಿ ಅಂದು ಚಾಲನೆ ಪ್ರಾರಂಭವಾಗುತ್ತದೆ. ಮುಂದಿನ ದಿನಗಳಲ್ಲಿ ಸರಕಾರದ ಅನುದಾನವನ್ನು, ಸಾರ್ವಜನಿಕರ ಸಹಭಾಗಿತ್ವ ಮತ್ತು ಬೇರೆ ಬೇರೆ ಕಂಪೆನಿಗಳ ಸಿಎಸ್‌ಆರ್‌ ಚಟುವಟಿಕೆಗಳನ್ನು ಇಲ್ಲಿ ನಡೆಸುವ ಮೂಲಕ ಒಂದು ಅಭಿವೃದ್ಧಿಯ ಕೇಂದ್ರವನ್ನಾಗಿ ಮಾಡುವ ಆಲೋಚನೆಯಿದೆ. ಸಾಂಸ್ಕೃತಿಕವಾಗಿ ಜಗತ್ತಿನ ಬೇರೆ ಬೇರೆ ಭಾಗದ ಜನರನ್ನು ಕಾರ್ಕಳಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ ಈ ಥೀಮ್‌ ಪಾರ್ಕ್‌ ರೂಪುಗೊಳ್ಳುತ್ತಿದೆ ಎಂದರು.

ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದ ನಿಕಟ ಪೂರ್ವ ಜಿ.ಪಂ. ಸದಸ್ಯ ಸುಮಿತ್‌ ಶೆಟ್ಟಿ , ಪರಶುರಾಮ ಥೀಮ್‌ ಪಾರ್ಕ್‌ ಮೂಲಕ ಕಾರ್ಕಳ ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಕಾರ್ಕಳದ ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಸುನೀಲ್‌ ಕುಮಾರ್‌ ಅವರ ಕಾರ್ಯತತ್ಪರತೆ ಶ್ಲಾಘನೀಯ. ಜನತೆಯನ್ನು ಒಗ್ಗೂಡಿಸಿಕೊಂಡು ಸುತ್ತಲಿನ ಊರಿಗೆ ಕೇಂದ್ರ ಭಾಗದಂತಿರುವ ಬೈಲೂರಿನ ಉಮಿಲ್‌ ಕುಂಜದಲ್ಲಿ ನಡೆಯುತ್ತಿರುವ ಸಚಿವರ ಈ ಯೋಜನೆ ಮಾದರಿಯಾಗಲಿದೆ ಎಂದರು.

ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುರುದತ್‌ ಎಂ.ಎನ್‌ ಮಾತನಾಡಿ, ಕಾರ್ಕಳದ ಸಂಸ್ಕೃತಿ ಮತ್ತು ಕಲೆಯನ್ನು ಇಡೀ ಪ್ರಪಂಚಕ್ಕೆ ಸಾರುವಲ್ಲಿ ಕಾರ್ಕಳ ಉತ್ಸವ ಯಶಸ್ವಿಯಾಗಿದೆ. ಇದೀಗ ತುಳುನಾಡಿನ ಸಂಸ್ಕೃತಿ ಜಗತ್ತಿನೆಲ್ಲೆಡೆ ಸಾರುವ ಜವಾಬ್ದಾರಿ ನಮ್ಮ ಮೇಲಿದೆ. ಪರಶುರಾಮ ಥೀಮ್‌ ಪಾರ್ಕ್‌ ಲೋಕಾರ್ಪಣೆ ಕಾರ್ಯಕ್ರಮ ತುಳು ಸಂಸ್ಕೃತಿಯನ್ನು ಹೊರ ರಾಜ್ಯ ಮತ್ತು ದೇಶದ ಜನತೆಗೂ ತಿಳಿಸಲು ಇರುವ ಒಂದು ಒಳ್ಳೆಯ ಅವಕಾಶ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ದಿನೇಶ್ಚಂದ್ರ ಹೆಗ್ಡೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಸಂಪತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಪೂರ್ಣಿಮಾ, ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಹೆಬ್ರಿ ತಹಶೀಲ್ದಾರ ಕೆ. ಪುರಂದರ, ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ್‌, ಉದ್ಯಮಿಗಳಾದ ಸಂತೋಷ್‌ ವಾಗ್ಳೆ, ಸುಧೀರ್‌ ಹೆಗ್ಡೆ ಮತ್ತು ಗ್ರಾಮ ಪಂಚಾಯತ್‌ನ ಅಧ್ಯಕ್ಷರುಗಳಾದ ಕಲ್ಯಾ ಸಂಜೀವ ಶೆಟ್ಟಿ, ಬೈಲೂರು ಜಗದೀಶ್‌ ಪೂಜಾರಿ, ಕುಕ್ಕುಂದೂರು ಶಶಿಮಣಿ ಸಂಪತ್‌, ಯರ್ಲಪಾಡಿ ಪ್ರಮೀಳಾ ಮತ್ತು ನೀರೆ ಶಾಲಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾರ್ಥನೆ ಜ್ಯೋತಿ ರಮೇಶ್‌ ನೆರವೇರಿಸಿ, ವಿಕ್ರಮ್‌ ಹೆಗ್ಡೆ ಸ್ವಾಗತಿಸಿದರು. ರವೀಂದ್ರ ಕುಮಾರ್‌ ಕಾರ್ಯಕ್ರಮ ನಿರೂಪಿಸಿ ಉದಯ್‌ ಕುಮಾರ್‌ ಹೆಗ್ಡೆ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here

Most Popular

error: Content is protected !!