Saturday, December 10, 2022
spot_img
Homeಸುದ್ದಿಮಂಗಳೂರು ಸ್ಫೋಟ ಪ್ರಕರಣ : ಆಟೋ ಚಾಲಕ ಚೇತರಿಕೆ

ಮಂಗಳೂರು ಸ್ಫೋಟ ಪ್ರಕರಣ : ಆಟೋ ಚಾಲಕ ಚೇತರಿಕೆ

ಜಿಲ್ಲಾಡಳಿತ, ಶಾಸಕರಿಂದ ನೆರವಿನ ಭರವಸೆ

ಮಂಗಳೂರು: ಮಂಗಳೂರಿನ ನಾಗುರಿ ಸಮೀಪ ಸಂಭವಿಸಿದ ಆಟೋ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಚೇತರಿಸಿಕೊಳ್ಳುತ್ತಿದ್ದಾರೆ. ಸ್ಫೋಟದಲ್ಲಿ ಆಟೋಗೆ ಭಾಗಶಃ ಹಾನಿಯಾಗಿದೆ. ತನಿಖೆಯ ಸಲುವಾಗಿ ಈಗ ಆಟೋ ಪೊಲೀಸರ ವಶದಲ್ಲಿರುವುದರಿಂದ ಪುರುಷೋತ್ತಮ ಅವರಿಗೆ ಜೀವನಾಧಾರ ಕೈತಪ್ಪಿದಂತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅವರಿಗೆ ನೆರವಾಗುವ ಭರವಸೆ ನೀಡಿದೆ.
ಪುರುಷೋತ್ತಮ ಪೂಜಾರಿಯವರ ಮುಖ, ಕೈ ಮತ್ತಿತರ ಭಾಗಗಳಿಗೆ ಸುಟ್ಟ ಗಾಯವಾಗಿದೆ. ಆಟೋ ಚಾಲನೆಯಿಂದಲೇ ಸಂಸಾರ ನಡೆಸುತ್ತಿರುವ ಪುರುಷೋತ್ತಮ ಪೂಜಾರಿಯವರಿಗೆ ನೆರವು ನೀಡಬೇಕೆಂಬ ಕಳಕಳಿಯ ವಿನಂತಿ ವ್ಯಕ್ತವಾಗಿತ್ತು. ಮುಂದಿನ ಮೇ ತಿಂಗಳಲ್ಲಿ ಪೂಜಾರಿಯವರ ಪುತ್ರಿಯ ವಿವಾಹ ನಿಶ್ಚಯಿಸಲಾಗಿದ್ದು, ಮದುವೆಗೆ ಅಗತ್ಯವಿರುವ ಹಣವನ್ನು ಪೂಜಾರಿಯವರು ಹೊಂದಿಸುತ್ತಿದ್ದರು. ಈ ನಡುವೆ ಪೂಜಾರಿಯವರು ಹೃದಯ ಸಂಬಂಧಿ ಕಾಯಿಲೆಗೆ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಅವರ ಕುಟುಂಬ ತಿಳಿಸಿದೆ.
15 ವರ್ಷಗಳಿಂದ ಆಟೋ ಓಡಿಸುತ್ತಿದ್ದಾರೆ. ಘಟನೆಯಿಂದ ಕುಟುಂಬ ಆಘಾತಕ್ಕೊಳಗಾಗಿದೆ. ಅವರ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಇಡೀ ದಿನ ಆಸ್ಪತ್ರೆಯಲ್ಲಿ ಕಣ್ಣೀರಿಡುತ್ತಿದ್ದಾರೆ. ಇದು ಕುಟುಂಬಕ್ಕೆ ಅತ್ಯಂತ ಕಷ್ಟಕರ ಸಮಯವಾಗಿದೆ ಎಂದು ಪೂಜಾರಿ ಸಂಬಂಧಿಕರೊಬ್ಬರು ಹೇಳಿದರು.
ಪೂಜಾರಿಯವರು ಶೀಘ್ರವೇ ಚೇತರಿಸಿಕೊಂಡರೂ ಆಟೊ ರಿಕ್ಷಾ ಓಡಿಸಲು ಸಾಧ್ಯವಿಲ್ಲ, ಏಕೆಂದರೆ ಆಟೋವನ್ನು ಪೊಲೀಸರು ತನಿಖೆಗೊಳಪಡಿಸಿದ್ದಾರೆ.ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಆಟೋರಿಕ್ಷಾ ನೀಡುವುದಾಗಿ ಹಾಗೂ ಪೂಜಾರಿ ಅವರ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಭರವಸೆ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಪೂಜಾರಿ ಅವರ ಕುಟುಂಬಕ್ಕೆ ಎಲ್ಲ ರೀತಿಯ ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದಾರೆ. ಪೂಜಾರಿ ಅವರಿಗೆ ಪರಿಹಾರ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ.
ಭಯೋತ್ಪಾದನೆ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಲು ಅವಕಾಶವಿರುವುದರಿಂದ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಅವರು ಈ ಹಿಂದೆ ಪೂಜಾರಿಯವರಿಗೆ ಪರಿಹಾರದ ಭರವಸೆ ನೀಡಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!