Saturday, December 10, 2022
spot_img
Homeಶೈಕ್ಷಣಿಕಬೆಳಗಾವಿ : ಗಡಿ ಗ್ರಾಮಗಳಲ್ಲಿ ಕನ್ನಡ ಶಾಲೆಗಳ ಕೊರತೆ : ಮರಾಠಿ ಶಾಲೆಗಳನ್ನು ಅವಲಂಬಿಸುತ್ತಿರುವ ಮಕ್ಕಳು

ಬೆಳಗಾವಿ : ಗಡಿ ಗ್ರಾಮಗಳಲ್ಲಿ ಕನ್ನಡ ಶಾಲೆಗಳ ಕೊರತೆ : ಮರಾಠಿ ಶಾಲೆಗಳನ್ನು ಅವಲಂಬಿಸುತ್ತಿರುವ ಮಕ್ಕಳು

ಬೆಳಗಾವಿ : ಜಿಲ್ಲೆಯ ಮಹಾರಾಷ್ಟ್ರ ಗಡಿ ಭಾಗದ ನೂರಾರು ಹಳ್ಳಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯಲು ವಿದ್ಯಾರ್ಥಿಗಳಿದ್ದರೂ ಕನ್ನಡ ಮಾಧ್ಯಮ ಪ್ರೌಢಶಾಲೆಗಳೇ ಇಲ್ಲ! ಇದರಿಂದ ಕನ್ನಡ ಭಾಷಾ ಅಭಿವೃದ್ಧಿಗೂ ತೊಡಕಾಗಿದೆ. ಒಂದೆಡೆ ಕರ್ನಾಟಕದ ಗಡಿ ಭಾಗದ 850ಕ್ಕೂ ಹೆಚ್ಚು ಹಳ್ಳಿಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಲು ಮಹಾರಾಷ್ಟ್ರ ಸರಕಾರ ದಾಖಲೆ ಸಂಗ್ರಹಿಸುತ್ತಿದೆ. ಹೀಗಿರುವಾಗ ಗಡಿಭಾಗದಲ್ಲಿ ಕನ್ನಡ ಭಾಷೆಗೆ ಪ್ರೋತ್ಸಾಹ ನೀಡಬೇಕಾದ ಕರ್ನಾಟಕ ಸರಕಾರ ನಿರ್ಲಕ್ಷ ಧೋರಣೆ ತಾಳುತ್ತಿದೆ ಎಂದು ಪ್ರಜ್ಞಾವಂತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಮಕ್ಕಳು ಕಲಿಯುವಂತಾದರೆ ಭಾಷೆ ಅಭಿವೃದ್ಧಿಗೂ ಪೂರಕ. ಆದರೆ ಕನ್ನಡ ಪ್ರೌಢ ಶಾಲೆಗಳೇ ಇಲ್ಲದ ಕಾರಣ ಈ ಭಾಗದ ಬಹುತೇಕ ಪಾಲಕರು ಮಕ್ಕಳನ್ನು ಅನಿವಾರ್ಯವಾಗಿ ಮರಾಠಿ ಸೇರಿದಂತೆ ಬೇರೆ ಮಾಧ್ಯಮ ಶಾಲೆಗಳಿಗೆ ಕಳಿಸುವಂತಾಗಿದೆ ಎಂಬುದು ಕನ್ನಡಪರ ಸಂಘಟನೆಗಳ ಆರೋಪವಾಗಿದೆ.
ಬೆಳಗಾವಿ ತಾಲೂಕಿನ ಉಚಗಾವಿ, ಬೆಕ್ಕಿನಕೆರೆ, ಕುದ್ರೇಮನಿ, ಗೋಜಗಾ, ಮಣ್ಣೂರ, ಹಿಂಡಲಗಾ ಮತ್ತಿತರ ಗ್ರಾಮಗಳಲ್ಲಿ ಸರಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಇಲ್ಲದ್ದರಿಂದ ಪ್ರಾಥಮಿಕ ಶಾಲೆಗಳನ್ನು ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಹೈಸ್ಕೂಲ್‌ ಶಿಕ್ಷಣಕ್ಕೆ 10-20 ಕಿ.ಮೀ ದೂರದ ಬೆಳಗಾವಿ ನಗರಕ್ಕೆ ಬರಬೇಕಿದೆ. ಈ ಗ್ರಾಮಗಳ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಲು ಆಸಕ್ತಿ ಹೊಂದಿದ್ದಾರೆ. ಆದರೆ, ಶಾಲೆಗಳೇ ಇಲ್ಲದ ಕಾರಣ ಅನ್ಯ ಮಾಧ್ಯಮಗಳಿಗೆ ಸೇರಿಸುವ ಅನಿವಾರ್ಯತೆ ಇದೆ. ಕನ್ನಡ ಮಾಧ್ಯಮ ಪ್ರೌಢಶಾಲೆ ಸ್ಥಾಪಿಸುವಂತೆ ಸಂಬಂಧಪಟ್ಟ ಇಲಾಖೆಗಳಿಂದ ಸರಕಾರಕ್ಕೆ ಪ್ರತಿವರ್ಷ ಪ್ರಸ್ತಾವ ಸಲ್ಲಿಕೆಯಾದರೂ ಜನ ಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆಯಿಂದ ಬೇಡಿಕೆ ಈಡೇರುತ್ತಿಲ್ಲ ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.

ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆ
ಒಂದೆಡೆ ಕನ್ನಡ ಶಾಲೆಗಳ ಕೊರತೆಯಾದರೆ, ಇನ್ನೊಂದೆಡೆ ಕನ್ನಡ ಹಾಗೂ ಮರಾಠಿ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷಾ ಶಿಕ್ಷಕರ ಕೊರತೆಯೂ ಕಾಡುತ್ತಿದೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 130 ಸರಕಾರಿ ಪ್ರೌಢ ಶಾಲೆಗಳಿದ್ದರೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆವ್ಯಾಪ್ತಿಯಲ್ಲಿ 193 ಸರಕಾರಿ ಪ್ರೌಢಶಾಲೆಗಳಿವೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 227 ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 604 ಪ್ರೌಢ ಶಾಲಾ ಶಿಕ್ಷಕರ ಕೊರತೆಯಿದೆ. ಎರಡೂ ಶೈಕ್ಷಣಿಕ ಜಿಲ್ಲೆಗಳಿಂದ ಕನ್ನಡ ಭಾಷಾ ಶಿಕ್ಷಕರ ಕೊರತೆಯೇ ಹೆಚ್ಚಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಒಟ್ಟು ಕೊರತೆಯಿರುವ ಶಿಕ್ಷಕ ಹುದ್ದೆಗಳಲ್ಲಿ 102 ಕನ್ನಡ ಭಾಷಾ ಶಿಕ್ಷಕರ ಕೊರತೆಯಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಮೂಲಸೌಕರ್ಯ ಸುಧಾರಿಸಬೇಕು
ಹುಕ್ಕೇರಿ ತಾಲೂಕಿನ ಯಮಕನಮರಡಿಯ ಚಿಕ್ಕಾಲಗುಡ್ಡ, ಉಳ್ಳಾಗಡ್ಡಿ ಖಾನಾಪುರ, ಮಣಗುತ್ತಿ, ದಾದಬಾನಟ್ಟಿ, ಬೋಳಶಾನಟ್ಟಿ, ಮಜತಿ, ಗುಡಗನಹಟ್ಟಿ, ದಡ್ಡಿ ಮೊದಲಾದ ಗ್ರಾಮಗಳು, ಸಂಕೇಶ್ವರ ಹೋಬಳಿಯ ಶೇಕಿನ ಹೊಸೂರ್‌, ಬುಗುಟೆ ಆಲೂರ್‌, ಬೈರಾಪುರ, ಸೊಲ್ಲಾಪುರ, ಕೋಣನಕೇರಿ, ಹಡಲಗಾ, ಮಸೋಬಾ ಮೊದಲಾದ ಗ್ರಾಮಗಳು ಗಡಿ ಭಾಗದಲ್ಲಿವೆ. ಆದರೆ, ಈ ಭಾಗದಲ್ಲಿ ಬಸ್‌ ಸೌಲಭ್ಯದ ಕೊರತೆಯಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಮಹಾರಾಷ್ಟ್ರ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ಹೋಗುವಂತಾಗಿದೆ ಎಂದು ಕನ್ನಡ ಪರ ಸಂಘಟನೆಗಳು ತಿಳಿಸಿವೆ.

LEAVE A REPLY

Please enter your comment!
Please enter your name here

Most Popular

error: Content is protected !!