Saturday, December 10, 2022
spot_img
Homeಅಂಕಣಲೇಖನ- ವಿಶ್ವಗುರು ಕನಸಿಗೆ ಜನಸಂಖ್ಯಾ ಸ್ಫೋಟದ ಆಘಾತ!

ಲೇಖನ- ವಿಶ್ವಗುರು ಕನಸಿಗೆ ಜನಸಂಖ್ಯಾ ಸ್ಫೋಟದ ಆಘಾತ!

ಏರುತ್ತಿರುವ ಜನಸಂಖ್ಯೆ ನಿಯಂತ್ರಿಸಲು ಕಠಿಣ ಕ್ರಮ ಅನಿವಾರ್ಯ

ಭಾರತದ ಜನಸಂಖ್ಯೆ ಇನ್ನು ಒಂದೇ ವರ್ಷದಲ್ಲಿ ಚೀನಾವನ್ನು ಮೀರಿಸಲಿದೆ. 2023ರಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತ ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಅಗ್ರಪಂಕ್ತಿಗೇರಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಸದ್ಯ ಭಾರತದಲ್ಲಿ 141 ಕೋಟಿ ಹಾಗೂ ಚೀನಾದಲ್ಲಿ 145 ಕೋಟಿ ಜನರಿದ್ದಾರೆ. ನಿತ್ಯ ಜೀವನದ ಗಡಿಬಿಡಿಯ ನಡುವೆಯೇ ವಿಶ್ವದ ಜನಸಂಖ್ಯೆ ನ.15ರ ಬೆಳಗ್ಗೆ 800 ಕೋಟಿ ತಲುಪಿದೆ. ಪ್ರತಿವರ್ಷ ವಿಶ್ವದಲ್ಲಿ ಅಂದಾಜು 7 ಕೋಟಿ ಜನರ ಜನನವಾಗುತ್ತಿದ್ದರೆ, 6 ಕೋಟಿ ಜನ ಸಾಯುತ್ತಿದ್ದಾರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಭಾರತದಲ್ಲಿ ಏರುತ್ತಿರುವ ಜನಸಂಖ್ಯೆಯ ನಾಗಾಲೋಟ.
ಜನಸಂಖ್ಯಾ ನಿಯಂತ್ರಣಕ್ಕೆ ಭಾರತದಲ್ಲಿ ಕಠಿಣ ಕಾನೂನುಗಳನ್ನು ತರಬೇಕಾದ ಅಗತ್ಯ ತಲೆದೋರಿದೆ. ಇಂದು ಎಲ್ಲ ಜಾತಿ, ಧರ್ಮ, ಮತಗಳಿಗೆ ಅನ್ವಯವಾಗುವ ಹಾಗೆ ಜನಸಂಖ್ಯಾ ನೀತಿಯನ್ನು ರೂಪಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಭಾರತದ ಜನಸಂಖ್ಯೆ ಕೇವಲ 70 ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ. ಹಿಂದೆ ಮನೆಯಲ್ಲಿ ಮಕ್ಕಳಾಗ ಬೇಕು, ಮಳೆ ಬಂದರೆ ಬೆಳೆ ಬೆಳೆಯುತ್ತೆ, ಮಕ್ಕಳಾದರೆ ಕೆಲಸಕ್ಕೆ ಜನ ಆಗುತ್ತಾರೆ ಎಂಬ ಯೋಚನೆ ಇತ್ತು. ನಂತರ ಆರತಿಗೊಂದು ಹೆಣ್ಣು, ಕೀರ್ತಿಗೊಂದು ಗಂಡು ಎಂಬ ಆಲೋಚನೆ ಬಂತು. ಅನಂತರ ನಾವಿಬ್ಬರೂ ನಮಗಿಬ್ಬರು ಎಂಬ ಘೋಷಣೆ ಶುರುವಾಯಿತು. ಈಗ ಗಂಡಾಗಲಿ-ಹೆಣ್ಣಾಗಲಿ ಮಗು ಒಂದೇ ಸಾಕು ಎಂಬ ಯೋಚನೆ ಬಂದಿದೆ. ಆದರೆ ಭಾರತದಲ್ಲಿ ಇದು ಎಲ್ಲ ಧರ್ಮಗಳಲ್ಲಿ ಸಮಾನವಾಗಿ ಪಾಲನೆಯಾಗುತ್ತಿಲ್ಲ. ಜನಸಂಖ್ಯೆ ದೇಶದ ಸಂಪನ್ಮೂಲ ಹೌದು. ಆದರೆ ಅದು ವಿನಾಶಕ್ಕೂ ಕಾರಣವಾಗಬಹುದು. ಭಾರತದಲ್ಲಿ ಒಂದೇ ಸಮುದಾಯದ ಜನಸಂಖ್ಯೆ ಕಳವಳಕಾರಿಯಾಗಿ ಹೆಚ್ಚುತ್ತಿರುವುದು ಗಮನಕ್ಕೆ ಬರುತ್ತದೆ. ಇದು ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗಲಿದೆ.
ಜನಸಂಖ್ಯೆ ಹೆಚ್ಚಳದಿಂದಾಗಿ ನಗರ ಪ್ರದೇಶದಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಕೃಷಿ ಭೂಮಿ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಕೊರತೆ ಎದುರಾಗುತ್ತಿದೆ. ಇದರ ಪರಿಣಾಮವಾಗಿ ಭವಿಷ್ಯದಲ್ಲಿ ಆಹಾರ, ನೀರು, ವಸತಿ ಎಲ್ಲವೂ ದೊಡ್ಡ ಸಮಸ್ಯೆಯಾಗಲಿದೆ. ಇದರೊಂದಿಗೆ ನಿರುದ್ಯೋಗ, ಬಡತನ ನಮ್ಮನ್ನು ಹೈರಣಾಗಿಸಿದೆ.
ಭಾರತದಲ್ಲಿ ತೆರಿಗೆ ಪಾವತಿಸುವವರಿಗಿಂತ ಉಚಿತಗಳಲ್ಲಿ ಬದುಕುವವರ ಜನ ಸಂಖ್ಯೆ ಹೆಚ್ಚಾಗಿದೆ. ಜಗತ್ತಿನ ದೊಡ್ಡಣ್ಣನಾಗಲು ಹೊರಟಿರುವ ಭಾರತಕ್ಕೆ ಜನಸಂಖ್ಯಾ ಸ್ಫೋಟ ಒಂದು ದೊಡ್ಡ ಹಿನ್ನಡೆಯಾಗಲಿದೆ. ಮಿತಿಗಿಂತ ಹೆಚ್ಚು ಮಕ್ಕಳಿದ್ದರೆ ಸರಕಾರಿ ಸೌಲ್ಯಭ್ಯಗಳು ಸಿಗುವುದಿಲ್ಲ ಮತ್ತು ಯಾವ ಯೋಜನೆಗಳು ದೊರಕುವುದಿಲ್ಲ ಎಂಬಂಥ ಒಂದಷ್ಟು ಕಠಿಣ ಕಾನೂನುಗಳನ್ನು ಎಲ್ಲ ಪ್ರದೇಶದವರಿಗೂ, ಧರ್ಮಗಳಿಗೂ ಅನ್ವಯಿಸುವಂತೆ ಜಾರಿಗೊಳಿಸಿದರೆ ಜನಸಂಖ್ಯೆ ಹೆಚ್ಚಳಕ್ಕೆ ತುಸು ತಡೆ ಒಡ್ಡಬಹುದು.
ನಮ್ಮ ದೇಶದಲ್ಲಿ ಓಟ್‍ಬ್ಯಾಂಕ್ ರಾಜಕೀಯದಿಂದಾಗಿ ಇಂಥಹ ಕಾನೂನುಗಳಿಗೆ ವಿರೋಧವಿದೆ. ಸರಕಾರದ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಜನಸಂಖ್ಯೆಯಲ್ಲಿ ಅತಿ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶ ಈಗಾಗಲೇ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದು ಇತರ ರಾಜ್ಯಗಳಿಗೆ ಮಾದರಿಯಾಗಿದೆ.
ಭಾರತದ ಜನಸಂಖ್ಯೆಯನ್ನು ನಿಯಂತ್ರಿಸದಿದ್ದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿಶ್ವಗುರು ಆಗಲು ಹೊರಟಿರುವ ಭಾರತಕ್ಕೆ ಜನಸಂಖ್ಯಾ ಸ್ಫೋಟ ಸವಾಲಾಗಿದೆ. ಜಗತ್ತಿನ ನಾಯಕ ಎಂದೆನಿಸಿಕೊಂಡಿರುವ ನಮ್ಮ ದೇಶದ ಪ್ರಧಾನಮಂತ್ರಿ ಈ ಸಮಸ್ಯೆಯನ್ನು ಹೇಗೆ ನಿಭಾಯಿಸಬಲ್ಲರು? ಭಾರತದ ವಿಶ್ವಗುರು ಕನಸಿಗೆ ಜನಸಂಖ್ಯಾ ಸ್ಫೋಟ ತಣ್ಣೀರೆರಚಲಿದೆಯೇ? ಕಾಲವೇ ಉತ್ತರಿಸಲಿದೆ.

ಶೈಲೇಶ್ ಶೆಟ್ಟಿ ಬೈಲೂರು

LEAVE A REPLY

Please enter your comment!
Please enter your name here

Most Popular

error: Content is protected !!