ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ಹೇಳಿಲ್ಲ : ಸಚಿವ ನಾಗೇಶ್‌ ಸ್ಪಷ್ಟನೆ

ಒಂದು ಧರ್ಮದವರನ್ನು ಖುಷಿ ಪಡಿಸಲು ಕಾಂಗ್ರೆಸ್‌ ವಿವಾದ

ಬೆಂಗಳೂರು : ಚುನಾವಣಾ ಸಮಯದಲ್ಲಿ ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್‌ ಕೇಸರಿ ಬಣ್ಣವನ್ನು ವಿವಾದ ಮಾಡುತ್ತಿದೆ. ಯಾವುದೇ ಸುತ್ತೋಲೆಯಲ್ಲಿ ನಿರ್ದಿಷ್ಟವಾಗಿ ಇಂಥದ್ದೇ ಬಣ್ಣ ಬಳಿಯಬೇಕು, ಶಾಲಾ ಕಟ್ಟಡ ಹೀಗೆ ಇರಬೇಕು ಎಂದು ಹೇಳಿಲ್ಲ. ಶಾಲೆಯ ವಾತಾವರಣಕ್ಕೆ ತಕ್ಕಂತೆ ಕಟ್ಟಡಗಳನ್ನು ಕಟ್ಟಿ ಎಂದಿದ್ದೇವೆ. ಚುನಾವಣೆಗಾಗಿ ಬಣ್ಣದ ವಿಚಾರವನ್ನು ಇಟ್ಟುಕೊಂಡು ಅದರಲ್ಲೂ ಕೇಸರಿ ಬಣ್ಣದ ವಿಚಾರ ತೆಗೆದುಕೊಂಡು ರಾಜಕೀಯ ಮಾಡುತ್ತಿರುವುದು ದುರಾದೃಷ್ಟಕರ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಚುನಾವಣೆ ವರ್ಷವಾಗಿರುವುದರಿಂದ ಒಂದಷ್ಟು ಜನ ವಿರೋಧ ಮಾಡುವುದಕ್ಕಾಗಿ ವಿರೋಧ ಮಾಡುತ್ತಾರೆ. ಕಾಂಗ್ರೆಸ್‌ ಎಲ್ಲವನ್ನೂ ವಿರೋಧಿಸುವ ಚಾಳಿ ಬೆಳೆಸಿಕೊಂಡಿದೆ. ಕಳೆದ ಒಂದುವರೆ ವರ್ಷದಿಂದ ನೋಡುತ್ತಿದ್ದೇನೆ. ಶಿಕ್ಷಣ ಕ್ಷೇತ್ರದಲ್ಲೂ ಅನವಶ್ಯಕ ರಾಜಕೀಯ ಮಾಡುತ್ತಿದೆ. ವಿರೋಧ ಮಾಡಿಸುವುದಕ್ಕೆ ಒಂದಿಷ್ಟು ಜನರು ಇದ್ದಾರೆ. ವೋಟ್ ಬ್ಯಾಂಕ್​ಗಾಗಿ ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ವಿವರವಾಗಿ ಯೋಚಿಸಿದರೆ ಕೇವಲ ಒಂದು ಮತದ ಓಟ್‌ಗಾಗಿ ಪವಿತ್ರ ಕೇತ್ರವಾದ ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದಿದ್ದಾರೆ.
ಹಿಜಾಬ್‌ ವಿವಾದ ಒಂದು ಕಾಲೇಜಿನ ವಿಷಯವಾಗಿತ್ತು. ವಿದ್ಯಾರ್ಥಿಗಳು, ಎಸ್‌ಡಿಎಂಸಿ ಹಾಗೂ ಪ್ರಾಂಶುಪಾಲರ ನಡುವೆ ನಡೆಯುತ್ತಿತ್ತು. ಆದರೆ ಕಾಂಗ್ರೆಸ್‌ನ ಒಬ್ಬ ಹಿರಿಯ ರಾಜಕಾರಣಿ ಇದರ ಬಗ್ಗೆ ಮಾತನಾಡಿದಾಗ ಅದು ದೊಡ್ಡ ವಿಷಯವಾಯಿತು. ಅದು ಕೋರ್ಟ್‌ ಮೆಟ್ಟಿಲಿಗೆ ಹೋದ ಮೇಲೂ ಕೋರ್ಟ್ ತೀರ್ಪು ಕೊಟ್ಟಾದ ಮೇಲೆಯೂ ಹಿಜಾಬ್‌ ಹಾಕಿಕೊಳ್ಳಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ ಕೇಳಿರುವುದನ್ನು ನಾವು ನೋಡಿದ್ದೇವೆ ಎಂದರು.

error: Content is protected !!
Scroll to Top