ಜ್ಞಾನಸುಧಾದಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ – ಕಲೋತ್ಸವ

ಕಾರ್ಕಳ : ಪ್ರತಿಯೊಂದು ಮಕ್ಕಳಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆಯಿದೆ. ಮಕ್ಕಳಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಪೂರಕ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ ಕುಮಾರ್‌ ಅಭಿಪ್ರಾಯಪಟ್ಟರು.
ಅವರು ನ. 15ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಪದವಿಪೂರ್ವ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸಹಯೋಗದೊಂದಿಗೆ ಗಣಿತನಗರ ಜ್ಞಾನಸುಧಾ ಕಾಲೇಜು ಆವರಣದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣವೆಂದರೆ ಕೇವಲ ಪಠ್ಯವಲ್ಲ
ಶಿಕ್ಷಣವೆಂದರೆ ಕೇವಲ ಪಠ್ಯವಲ್ಲ. ಕ್ರೀಡೆ, ಕಲೆ, ಸಾಂಸ್ಕೃತಿಕ ಸೇರಿದಂತೆ ಪಠ್ಯೇತರ ಚಟುವಟಿಕೆಗಳನ್ನೂ ಶಿಕ್ಷಣ ಒಳಗೊಂಡಿದೆ. ಮಕ್ಕಳ ಪ್ರತಿಭಾ ಅನಾವರಣಕ್ಕೆ ಶಿಕ್ಷಣ ಇಲಾಖೆಯು ಶಾಲಾ, ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜಿಸುವ ಮುಖಾಂತರ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಶಾಲೆಯಲ್ಲಿ ದೊರೆಯುವ ಇಂತಹ ವೇದಿಕೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸುನೀಲ್‌ ಕುಮಾರ್‌ ಹೇಳಿದರು.
ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಶಿವರಾಜ್‌ ಕೆ., ಡಯಟ್‌ ಪ್ರಾಂಶುಪಾಲ ಗೋವಿಂದ ಮಡಿವಾಳ್‌, ಉಡುಪಿ ಜಿಲ್ಲಾ ಡಿಡಿಪಿಯು ಮಾರುತಿ, ಜಿಲ್ಲಾ ನೋಡಲ್‌ ಅಧಿಕಾರಿ ಚಂದ್ರ ನಾಯ್ಕ್‌, ಕ್ಷೇತ್ರ ಸಮನ್ವಯಾಧಿಕಾರಿ ನವೀನ್‌ ಶೆಟ್ಟಿ, ಕುಕ್ಕುಂದೂರು ಗ್ರಾ.ಪಂ. ಅಧ್ಯಕ್ಷೆ ಶಶಿಮಣಿ ಸಂಪತ್‌, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭಾಸ್ಕರ್‌, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಚಂದ್ರ ಕಾರಂತ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಸಂಜೀವ ದೇವಾಡಿಗ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅ‍ಧ್ಯಕ್ಷ ಮಹೇಶ್‌ ನಾಯಕ್‌, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಆರ್.‌ ಶೆಟ್ಟಿ ಶಿವಪುರ, ತಾಲೂಕು ಪ್ರತಿಭಾ ಕಾರಂಜಿ ನೋಡಲ್‌ ಅಧಿಕಾರಿ ವೆಂಕಟರಮಣ ಕಲ್ಕೂರ, ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್‌ ರಾವ್‌, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಪೂಜಾರಿ, ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕಿ ಉಷಾ ರಾವ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ ಜಿ. ಸ್ವಾಗತಿಸಿ, ಉಪನ್ಯಾಸಕಿ ಸಂಗೀತಾ ಕುಲಾಲ್‌ ಬೋಳ ನಿರೂಪಿಸಿದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್‌ ಶೆಟ್ಟಿ ವಂದಿಸಿದರು.













































error: Content is protected !!
Scroll to Top