Thursday, December 1, 2022
spot_img
Homeಅಂಕಣಕಗ್ಗದ ಸಂದೇಶ-ಬದುಕೆಂಬುದು ಜೂಜಾಟವು ನೋಡಾ…

ಕಗ್ಗದ ಸಂದೇಶ-ಬದುಕೆಂಬುದು ಜೂಜಾಟವು ನೋಡಾ…


ಬೇಡಿದುದನೀವನೀಶ್ವರನೆಂಬ ನಚ್ಚಿಲ್ಲ|
ಬೇಡಲೊಳಿತಾವುದದುದೆಂಬರರಿವಿಲ್ಲ||
ಕೂಡಿಬಂದುದನೆ ನೀನ್ ಅವನಿಚ್ಚೆಯೆಂದುಕೊಳೆ|
ನೀಡುಗೆದೆಗಟ್ಟಿಯನು- ಮಂಕುತಿಮ್ಮ||

ನಾವು ಬೇಡಿದ್ದನ್ನು ಪರಮಾತ್ಮನು ನೀಡುತ್ತಾನೆ ಎನ್ನುವ ಖಚಿತ ಭರವಸೆ‌ಯಿಲ್ಲ.. ಯಾವುದನ್ನು ಬೇಡಬೇಕು ಮತ್ತು ಯಾವುದನ್ನು ಬೇಡಬಾರದು ಎನ್ನುವ ಸರಿಯಾದ ತಿಳಿವಳಿಕೆಯು ನಮಗೆ ಇರುವುದಿಲ್ಲ. ಆಯಾಯ ಸಂದರ್ಭಕ್ಕೆ ಪರಮಾತ್ಮನಿಂದ ಏನು ನಮಗೆ ಒದಗಿ ಬರುವುದೋ ಅದು ಅವನ ಇಚ್ಚೆಯೆಂದುಕೊಂಡು ಅದನ್ನು ಸಂತೋಷವಾಗಿ ಸ್ವೀಕರಿಸಬೇಕು. ಏನೇ ಬರಲಿ ಅದನ್ನು ಧೈರ್ಯವಾಗಿ ಸ್ವೀಕರಿಸುತ್ತೇನೆ ಎನ್ನುವ ಗಟ್ಟಿತನವನ್ನು ಹೊಂದುವಲ್ಲಿ ಆ ದೇವರ ಅನುಗ್ರಹವನ್ನು ಬೇಡಬೇಕು ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.
ಬಯಕೆಗಳು ಇಲ್ಲದೆ ಬದುಕಿಲ್ಲ. ನಮ್ಮ ಅಪೇಕ್ಷೆಗಳನ್ನೆಲ್ಲಾ ಭಗವಂತನು ಈಡೇರಿಸಲಾರ. ಯಾರಿಗೆ? ಯಾವಾಗ? ಏನನ್ನು? ಎಷ್ಟು ಕೊಡಬೇಕು ಅಥವಾ ಬಿಡಬೇಕು ಎನ್ನುವುದು ಅವನಿಗೆ ಗೊತ್ತು. ಯಾವುದನ್ನು ಕೇಳಿದರೆ; ಪಡೆದರೆ ನಮ್ಮ ಬದುಕಿಗೆ ಒಳ್ಳೆಯದಾಗುತ್ತದೆ ಎಂಬ ಸರಿಯಾದ ಅರಿವು ನಮಗೆ ಇಲ್ಲ. ಬಂದುದೆಲ್ಲ ಬರಲಿ ಗೋವಿಂದನ ದಯೆ ಒಂದಿರಲಿ ಎಂಬಂತೆ ಏನೇ ಬರಲಿ ಅದನ್ನು ಎದುರಿಸುವಂತಹ ಮಾನಸಿಕ ಗಟ್ಟಿತನವನ್ನು

ಹೊಂದುವಲ್ಲಿ ದೇವರು ಅನುಗ್ರಹ ಬೇಕು.
ಯಾವ ಎಲೆ ಯಾರತ್ತ ಬಂದು ಬೀಳುವುದೆಂದು|
ಯಾರಿಗರಿವಿದೆ ಇಲ್ಲಿ ಎಲೆಯಾಟದಲ್ಲಿ?||
ಬಂದುದನು ಜೋಡಿಸುತ ಆಡುವುದೆ ಕೈಚಳಕ|
ಬಾಳೊಂದು ಜೂಟಾಟ- ಮುದ್ದುರಾಮ||

ಎಂದು ಕವಿ ಕೆ. ಶಿವಪ್ಪನವರು ನುಡಿದಂತೆ ಜೀವನವೆನ್ನುವುದು ಕೂಡ ಒಂದು ಇಸ್ಪೀಟು ಆಟ. ಆಡುವಾಗ ನಾವು ಬಯಸಿದ ಎಲೆಯೇ ಬರುವುದಿಲ್ಲ. ಯಾವ ಎಲೆ ಬರುತ್ತದೋ ಅದನ್ನೇ ಬಳಸಿ ಚಾಣಾಕ್ಷತನದಿಂದ ಆಡಬೇಕು. ಬದುಕು ಸಹ ಬಯಸಿದ ಹಾಗೆ ಇರಲ್ಲ. ಹೇಗೆಯೇ ಇರಲಿ, ಏನೇ ಬರಲಿ ಸಕಾರಾತ್ಮಕ ಮನೋಭಾವದೊಂದಿಗೆ ಧೈರ್ಯವಾಗಿ ಮುನ್ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ

ಅಧ್ಯಕ್ಷರು ಕಸಾಪ ಕಾರ್ಕಳ ಘಟಕ

LEAVE A REPLY

Please enter your comment!
Please enter your name here

Most Popular

error: Content is protected !!