ಸುರತ್ಕಲ್‌ ಟೋಲ್‌ಗೇಟ್‌ ಹೋರಾಟಕ್ಕೆ ಜಯ

ಮಂಗಳೂರು : ಕೊನೆಗೂ ಕರಾವಳಿ ಭಾಗದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದೆ. ಈ ಸಂಬಂಧ ಟ್ವೀಟ್‌ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು. ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ ಎಂದಿದ್ದಾರೆ.

60 ಕಿ.ಮೀ ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಇರಬಾರದು ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ. ಈ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿರುವ ಟೋಲ್‍ಗೇಟ್ ಅಕ್ರಮ ಎಂಬುದು ಟೋಲ್ ವಿರೋಧಿ ಹೋರಾಟಗಾರರ ಆರೋಪವಾಗಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‍ನ ಎನ್‌ಐಟಿಕೆ ಬಳಿ ಕಾರ್ಯಾಚರಿಸುತ್ತಿರುವ ಟೋಲ್‍ಗೇಟ್, ಉಡುಪಿ ಜಿಲ್ಲೆಯ ಹೆಜಮಾಡಿ ಟೋಲ್‍ಗೇಟ್ ಆರಂಭವಾದ ಬಳಿಕ ಮುಚ್ಚುವ ಒಪ್ಪಂದದೊಂದಿಗೆ 6 ವರ್ಷದ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡಿತ್ತು. ತಾತ್ಕಾಲಿಕ ನೆಲೆಯಲ್ಲಿ ಆರಂಭವಾದ ಟೋಲ್‌ನಲ್ಲೀ ಈಗಲೂ ಹಣ ಸಂಗ್ರಹ ಮಾಡುತ್ತಿರುವುದು ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು.

ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ 60 ಕಿ.ಮೀ ಒಳಗಿನ ಎಲ್ಲ ಟೋಲ್‍ಗೇಟ್‍ಗಳನ್ನು 90 ದಿನಗಳೊಳಗೆ ತೆರವುಗೊಳಿಸುವುದಾಗಿ ಲೋಕಸಭೆಯಲ್ಲಿ ಹೇಳಿದ್ದರು. ಈ ಹಿನ್ನೆಲೆ ಸಂಸದರು, ಶಾಸಕರು ಸುರತ್ಕಲ್ ಟೋಲ್‍ಗೇಟ್ ತೆರವು ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈ ಭರವಸೆಯ ಗಡವು ಜೂನ್ 22ಕ್ಕೆ ಮುಕ್ತಾಯಗೊಂಡಿದ್ದರೂ ಟೋಲ್‌ ಸಂಗ್ರಹ ನಡೆಯುತ್ತಿತ್ತು. ಹೀಗಾಗಿ ಅಕ್ರಮವಾಗಿ ನಡೆಯುತ್ತಿರುವ ಟೋಲ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದರು.

ಇದೀಗ ಸುರತ್ಕಲ್‌ನಲ್ಲಿ ಟೋಲ್‌ ಸಂಗ್ರಹ ರದ್ಧಾಗಿದೆ ಎಂದು ನಳೀನ್‌ ಕುಮಾರ್‌ ಟ್ವೀಟ್‌ ಮಾಡಿ ಸ್ಪಷ್ಟ ಪಡಿಸಿದ್ದಾರೆ. ಆದರೆ ಹೆಜಮಾಡಿ ಟೋಲ್‌ ಪ್ಲಾಜಾದಲ್ಲಿ ಹೆಚ್ಚುವರಿ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲು ಸರಕಾರ ನಿರ್ಧರಿಸಿದೆ.

error: Content is protected !!
Scroll to Top