Saturday, December 10, 2022
spot_img
Homeಸುದ್ದಿಇಂದು ಪಾಕ್‌-ಇಂಗ್ಲೆಂಡ್‌ ಫೈನಲ್‌ ಹೋರಾಟ

ಇಂದು ಪಾಕ್‌-ಇಂಗ್ಲೆಂಡ್‌ ಫೈನಲ್‌ ಹೋರಾಟ

ಎರಡೂ ತಂಡಗಳಿಗೆ ಎರಡನೇ ಸಲ ಕಪ್‌ ಗೆಲ್ಲುವ ಅವಕಾಶ

ಸಿಡ್ನಿ : ಐಸಿಸಿ ಟಿ20 ವಿಶ್ವಕಪ್ 2022 ಟೂರ್ನಿಯ ಫೈನಲ್‌ ಪಂದ್ಯ ಇಂದು ಮಧ್ಯಾಹ್ನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ನಲ್ಲಿ ಪಾಕಿಸ್ಥಾನ ಹಾಗೂ ಇಂಗ್ಲೆಂಡ್ ನಡುವೆ ನಡೆಯಲಿದೆ. ಸೆಮಿ ಫೈನಲ್​ನಲ್ಲಿ ಪಾಕ್ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಹಾಗೂ ಇಂಗ್ಲೆಂಡ್ ತಂಡ ಭಾರತವನ್ನು ಸೋಲಿಸಿ ಫೈನಲ್​ಗೆ ಪ್ರವೇಶ ಪಡೆದಿದೆ. ಟಿ20 ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಇದುವರೆಗೂ ಒಂದೊಂದು ಬಾರಿ ಚಾಂಪಿಯನ್‌ಗಳಾಗಿವೆ. 2009ರಲ್ಲಿ ಪಾಕಿಸ್ಥಾನ ಮೊದಲನೇ ಟಿ20 ವಿಶ್ವಕಪ್‌ ಜಯಿಸಿತ್ತು. ಇಂಗ್ಲೆಂಡ್ 2010ರಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿತ್ತು. ಹೀಗಾಗಿ ಇದೀಗ ಎರಡನೇ ಬಾರಿ ಕಪ್ ಗೆಲ್ಲುವ ತಂಡ ಯಾವುದು ಎಂಬುದು ನೋಡಬೇಕಿದೆ.
ಎರಡೂ ತಂಡಗಳು ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಬಲಿಷ್ಠವಾಗಿದೆ. ಪಾಕ್ ಪಾಳಯದಲ್ಲಿ ನಾಯಕ ಬಾಬರ್ ಅಜಮ್ ಸರಿಯಾದ ಸಮಯಕ್ಕೆ ಫಾರ್ಮ್​ಗೆ ಬಂದಿರುವುದು ಖುಷಿ ತಂದಿದೆ. ಮೊಹಮ್ಮದ್ ರಿಜ್ವಾನ್ ಕೂಡ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಈ ಓಪನರ್​ಗಳೇ ಪಾಕ್ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರ. ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಖರ್ ಅಹ್ಮದ್ ಮಧ್ಯಮ ಕ್ರಮಾಂಕದ ಬಲವಾಗಿದ್ದಾರೆ. ಬೌಲಿಂಗ್​ನಲ್ಲಿ ಶಾಹಿನ್ ಅಫ್ರಿದಿ ಘಾತಕ ವೇಗಿಯಾಗಿದ್ದರೆ ನಸೀಂ ಶಾ, ಹ್ಯಾರಿಸ್ ರೌಫ್ ಕೂಡ ಸ್ಟಾರ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ.
ಇಂಗ್ಲೆಂಡ್ ತಂಡ ಬ್ಯಾಟರ್​ಗಳ ಮೇಲೆ ಅವಲಂಬಿತವಾಗಿದೆ. 11ನೇ ಕ್ರಮಾಂಕದಲ್ಲಿ ಬರುವ ಆಟಗಾರ ಕೂಡ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಮುಖ್ಯವಾಗಿ ಓಪನರ್​ಗಳಾದ ಅಲೆಕ್ಸ್ ಹೇಲ್ಸ್ ಹಾಗೂ ಜೋಸ್ ಬಟ್ಲರ್ ಸೆಮಿ ಫೈನಲ್‌ನಲ್ಲಿ ಭಾರತ ವಿರುದ್ಧ ನೀಡಿದ ಪ್ರದರ್ಶನ ಪಾಕ್ ಪಡೆಯಲ್ಲಿ ಭಯ ಹುಟ್ಟಿಸಿರುವುದು ನಿಜ. ಮಧ್ಯಮ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್​ಸ್ಟೋನ್, ಮೊಯೀನ್ ಅಲಿ ಅಂತಹ ಟಿ20 ಸ್ಪೆಷಲಿಸ್ಟ್ ತಂಡದಲ್ಲಿದ್ದಾರೆ. ಆದಿಲ್ ರಶೀದ್, ಕ್ರಿಸ್ ಜೋರ್ಡನ್, ಕ್ರಿಸ್ ವೋಕ್ಸ್ ಹಾಗೂ ಸ್ಯಾಮ್ ಕುರ್ರನ್ ಪ್ರಮುಖ ಬೌಲರ್​ಗಳಾಗಿದ್ದಾರೆ.
ಮೆಲ್ಬೋರ್ನ್‌ ಕ್ರಿಕೆಟ್‌ ಸ್ಟೇಡಿಯಂನ ಪಿಚ್‌ ತುಂಬಾ ಭಿನ್ನವಾಗಿದೆ. ಇಲ್ಲಿ ಬೌನ್ಸ್ ಹಾಗೂ ಹೆಚ್ಚಿನ ಸ್ವಿಂಗ್‌ ಇದ್ದು, ವೇಗಿಗಳಿಗೆ ಅನುಕೂಲವಾಗಲಿದೆ. ಈ ಮೈದಾನದಲ್ಲಿ ಒಟ್ಟು 21 ಟಿ20 ಪಂದ್ಯಗಳು ನಡೆದಿದ್ದು 11 ಬಾರಿ ಚೇಸಿಂಗ್​ ನಡೆಸಿದ ತಂಡಗಳು ಗೆದ್ದಿದೆ. ಆದ್ದರಿಂದ ಈ ಪಂದ್ಯದಲ್ಲಿ ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಒಂದೊಮ್ಮೆ ಪಂದ್ಯಕ್ಕೆ ಆರಂಭದಲ್ಲಿ ಮಳೆ ಅಡ್ಡಿಪಡಿಸಿದರೆ ಆಗ ಮೊದಲು ಬ್ಯಾಟಿಂಗ್ ನಡೆಸಿದ ತಂಡಕ್ಕೆ ವರದಾನವಾಗಲಿದೆ. ಏಕೆಂದರೆ ಮಳೆ ಬಂದ ಬಳಿಕ ಈ ಮೈದಾನದಲ್ಲಿ ಚೆಂಡು ಅಷ್ಟಾಗಿ ವೇಗವಾಗಿ ಸಾಗುವುದಿಲ್ಲ ಇದರಿಂದ ಬ್ಯಾಟರ್​ಗಳಿಗೆ ರನ್​ ಗಳಿಸುವುದು ಕಷ್ಟವಾಗಲಿದೆ. ಆದ್ದರಿಂದ ಒಂದು ಕಡೆ ಟಾಸ್​ ಮತ್ತು ಮಳೆಯೂ ಕೂಡ ತಂಡದ ಕೈ ಹಿಡಿಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದೆ.

LEAVE A REPLY

Please enter your comment!
Please enter your name here

Most Popular

error: Content is protected !!