Thursday, December 1, 2022
spot_img
Homeಸುದ್ದಿಡಿ. 21 - 27 : ಮೂಡಬಿದ್ರೆ ಆಳ್ವಾಸ್‌ ವಿದ್ಯಾಸಂಸ್ಥೆಯಲ್ಲಿ ವಿಶ್ವ ಸಾಂಸ್ಕೃತಿಕ ಜಾಂಬೂರಿ

ಡಿ. 21 – 27 : ಮೂಡಬಿದ್ರೆ ಆಳ್ವಾಸ್‌ ವಿದ್ಯಾಸಂಸ್ಥೆಯಲ್ಲಿ ವಿಶ್ವ ಸಾಂಸ್ಕೃತಿಕ ಜಾಂಬೂರಿ

ಕಾರ್ಕಳ : ಮೂಡಬಿದ್ರೆ ಆಳ್ವಾಸ್‌ ವಿದ್ಯಾಸಂಸ್ಥೆಯಲ್ಲಿ ಡಿ. 21ರಿಂದ 27ರವರೆಗೆ ಭಾರತ್‌ ಸ್ಕೌಟ್‌- ಗೈಡ್ಸ್‌ ವಿಶ್ವ ಸಾಂಸ್ಕೃತಿಕ ಜಾಂಬೂರಿ ನಡೆಯಲಿದೆ. ಕೃಷಿ ಮೇಳ, ವಿಜ್ಞಾನ ಮೇಳ, ಆಹಾರೋತ್ಸವ, ಕಲಾ ಮೇಳ ಮತ್ತು ಪುಸ್ತಕ ಮೇಳ, ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳು ಜರಗಲಿದೆ. ಈ ಒಂದು ಅಪೂರ್ವ, ಅಮೋಘ, ಅದ್ಧೂರಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಂಘ -ಸಂಸ್ಥೆಗಳು ಹೆಚ್ಚಿನ ಸಹಕಾರ ನೀಡಬೇಕೆಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್‌ ಆಳ್ವ ಹೇಳಿದರು.

ಅವರು ನ. 12ರಂದು ಕರ್ನಾಟಕ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌, ಉಡುಪಿ ಜಿಲ್ಲಾ ಸಂಸ್ಥೆ, ಕಾರ್ಕಳ ಸ್ಥಳೀಯ ಸಂಸ್ಥೆಯ ಸಹಯೋಗದೊಂದಿಗೆ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ವಿಶ್ವ ಸಾಂಸ್ಕೃತಿಕ ಜಾಂಬೂರಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

35 ಕೋ.ರೂ. ವೆಚ್ಚ
ಆಳ್ವಾಸ್‌ನ ವಿದ್ಯಾಗಿರಿಯ ಆವರಣದಲ್ಲಿ ನಡೆಯಲಿರುವ ವಿಶ್ವ ಸಾಂಸ್ಕೃತಿಕ ಜಾಂಬೂರಿಗೆ 35 ಕೋ. ರೂ. ಖರ್ಚಾಗಲಿದೆ, ಈ ಕಾರ್ಯಕ್ರಮಕ್ಕೆ ಸರಕಾರದ ವತಿಯಿಂದ ದೊಡ್ಡ ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಸಚಿವ ಸುನೀಲ್‌ ಕುಮಾರ್‌ ಅವರ ಪ್ರಯತ್ನ ಈ ನಿಟ್ಟಿನಲ್ಲಿ ಬೇಕಿದೆ ಎಂದು ಆಳ್ವರು ಹೇಳಿದರು.

ಕ್ರಿಯಾಶೀಲ ಸಚಿವ ಸುನೀಲ್‌ ಕುಮಾರ್
ಸುನೀಲ್‌ ಕುಮಾರ್‌ ಅವರಂತಹ ಕ್ರಿಯಾಶೀಲ ಸಚಿವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲ್ಲಿವರೆಗೆ ಕಂಡಿಲ್ಲ. ಅವರು ವಿನೂತನ ಪರಿಕಲ್ಪನೆ ಮತ್ತು ಹೊಸತನಕ್ಕೆ ಉತ್ತಮ ನಿದರ್ಶನ ಎಂದು ಮೋಹನ್‌ ಆಳ್ವರು ಬಣ್ಣಿಸಿದರು.

ಸಚಿವ ಸುನೀಲ್‌ ಕುಮಾರ್‌ ಮಾತನಾಡಿ, 7 ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವುದು ಸರಕಾರದ ಕರ್ತವ್ಯವೂ ಆಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಕೇವಲ ತರಬೇತಿ ಮಾತ್ರವಲ್ಲದೇ ಬೇರೆ ಬೇರೆ ರೀತಿಯಾದ ಕಲೆ, ಸಂಸ್ಕೃತಿಯ ಪರಿಚಯವನ್ನು ಮಾಡಿಸುವಂತಹ ಕಾರ್ಯವಾಗಲಿದೆ. ಇಂತಹ ಕಾರ್ಯಕ್ರಮ ಮೋಹನ್‌ ಆಳ್ವರ ನೇತೃತ್ವದಲ್ಲಿ ನಡೆಯುತ್ತಿರುವುದು ಸಂತಸದ ವಿಚಾರವೆಂದರು.

ಜಿಲ್ಲಾ ಗೈಡ್‌ ಆಯುಕ್ತೆ ಜ್ಯೋತಿ ಜೆ. ಪೈ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್‌ ರಾವ್‌, ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಹೆಬ್ರಿ ತಹಶೀಲ್ದಾರ್‌ ಕೆ. ಪುರಂದರ, ಹೆಬ್ರಿ ತಾ.ಪಂ. ಇಒ ಶಶಿಧರ್, ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ, ಕ.ಸಾ.ಪ. ಕಾರ್ಕಳ ಘಟಕದ ಅಧ್ಯಕ್ಷ ಪ್ರಭಾಕರ್‌ ಶೆಟ್ಟಿ ಕೊಂಡಳ್ಳಿ, ತಾ. ದೈ. ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಪೂಜಾರಿ, ಅ. ಶಿ. ಸಂಘದ ಅಧ್ಯಕ್ಷ ಪೃಥ್ವಿರಾಜ್‌ ಬಳ್ಳಾಲ್‌, ಮಂಗಳೂರು ವಿ.ವಿ. ಸಿಂಡಿಕೇಟ್‌ ಸದಸ್ಯ ಮೋಹನ್‌ ಪಡಿವಾಳ್, ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ‌ ಡಾ. ಮಂಜುನಾಥ ಕೋಟ್ಯಾನ್‌, ಉದ್ಯಮಿ ಅಂಡಾರು ಮಹಾವೀರ ಹೆಗ್ಡೆ, ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ್‌ ಶೆಟ್ಟಿ, ಸ್ಕೌಟ್‌ ಉಪಾಧ್ಯಕ್ಷ ಜಗದೀಶ್‌ ಹೆಗ್ಡೆ, ಕಾರ್ಕಳ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರವಿಚಂದ್ರ ಕಾರಂತ, ಶಿಕ್ಷಣ ಸಂಯೋಜಕ ಪ್ರವೀಣ್‌ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಕಳ ಸ್ಕೌಟ್‌ ಗೈಡ್ಸ್‌ ಅಧ್ಯಕ್ಷ ಎಂ.ಕೆ. ವಿಜಯ್‌ ಕುಮಾರ್‌ ಸ್ವಾಗತಿಸಿ, ಕಾರ್ಯದರ್ಶಿ ಗಣೇಶ್‌ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಗೈಡ್‌ ತರಬೇತಿ ಆಯುಕ್ತೆ ಸಾವಿತ್ರಿ ಮನೋಹರ್‌ ವಂದಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!