Saturday, December 10, 2022
spot_img
Homeಸುದ್ದಿರಾಜೀವ್‌ ಗಾಂಧಿ ಹಂತಕರ ಬಿಡುಗಡೆಗೆ ಸುಪ್ರೀಂ ಕೋರ್ಟ್‌ ಆದೇಶ

ರಾಜೀವ್‌ ಗಾಂಧಿ ಹಂತಕರ ಬಿಡುಗಡೆಗೆ ಸುಪ್ರೀಂ ಕೋರ್ಟ್‌ ಆದೇಶ

ಕಾಂಗ್ರೆಸ್‌ನಿಂದ ತೀರ್ಪಿನ ವಿರುದ್ಧ ತೀವ್ರ ಆಕ್ರೋಶ

ಹೊಸದಿಲ್ಲಿ : ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳಾದ ನಳಿನಿ ಶ್ರೀಹರನ್ ಮತ್ತು ಆರ್. ಪಿ. ರವಿಚಂದ್ರನ್ ಸೇರಿ ಐವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿದೆ.
ಆದರೆ ಸುಪ್ರೀಂಕೋರ್ಟ್ ತೀರ್ಪನ್ನು ಕಾಂಗ್ರೆಸ್ ವಿರೋಧಿಸಿದ್ದು, ಈ ಬಗ್ಗೆ ಸೋನಿಯಾ ಗಾಂಧಿಯವರೊಂದಿಗೆ ಪಕ್ಷಕ್ಕೆ ಭಿನ್ನಾಭಿಪ್ರಾಯವಿದೆ ಎಂದು ಹೇಳಿದೆ. ಕಾಂಗ್ರೆಸ್ ದೃಷ್ಟಿಕೋನವು ಕೇಂದ್ರ ಸರ್ಕಾರದಂತೆಯೇ ಇದೆ. ಪಕ್ಷ ಸೋನಿಯಾ ಗಾಂಧಿಯವರ ಅಭಿಪ್ರಾಯವನ್ನು ಒಪ್ಪುವುದಿಲ್ಲ, ಆ ನಿಲುವನ್ನು ಎಂದಿಗೂ ಒಪ್ಪಿಲ್ಲ. ವರ್ಷಗಳಿಂದ ಈ ಅಭಿಪ್ರಾಯವನ್ನು ಸ್ಪಷ್ಟಪಡಿಸಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.
ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ಗುಂಪಿನ ಮಹಿಳಾ ಆತ್ಮಹತ್ಯಾ ಬಾಂಬರ್‌ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ್ದಳು. ಹತ್ಯೆ ಪ್ರಕರಣದಲ್ಲಿ ಏಳು ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿತ್ತು. 2000 ರಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮಧ್ಯಸ್ಥಿಕೆಯ ಮೇಲೆ ನಳಿನಿ ಶ್ರೀಹರನ್ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಗಿತ್ತು.
2014ರಲ್ಲಿ ಇನ್ನೂ ಆರು ಅಪರಾಧಿಗಳ ಶಿಕ್ಷೆಯನ್ನು ಕೂಡ ತಗ್ಗಿಸಲಾಯಿತು. ಗರ್ಭಿಣಿಯಾಗಿದ್ದ ನಳಿನಿಯನ್ನು ಬಂಧಿಸಿದಾಗ ಆಕೆಗೆ ಕ್ಷಮೆ ನೀಡಬೇಕೆಂದು ಸೋನಿಯಾ ಗಾಂಧಿ ನ್ಯಾಯಾಲಯವನ್ನು ಒತ್ತಾಯಿಸಿದ್ದರು. ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠ ಮೇ ತಿಂಗಳಲ್ಲಿ ಬಿಡುಗಡೆಯಾದ ಮತ್ತೊಬ್ಬ ಅಪರಾಧಿ ಎಜಿ ಪೆರಾರಿವಾಲನ್ ಅವರ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಂಡು ನಿನ್ನೆ ಈ ಆದೇಶ ಪ್ರಕಟಿಸಿದೆ.
ಪ್ರಸ್ತುತ ಪೆರೋಲ್ ಮೇಲೆ ಹೊರಗಿರುವ ನಳಿನಿ, ಮದ್ರಾಸ್ ಹೈಕೋರ್ಟ್ ತನ್ನ ಮನವಿಯನ್ನು ತಿರಸ್ಕರಿಸಿದ ನಂತರ ಜೈಲಿನಿಂದ ಬೇಗನೆ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಳು. ಮೇ 18 ರಂದು ಸುಪ್ರೀಂ ಕೋರ್ಟ್ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ವಿಶೇಷ ಅಧಿಕಾರವನ್ನು ಚಲಾಯಿಸುವ ಮೂಲಕ 30 ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದ ಪೆರಾರಿವಾಲನ್‌ನನ್ನು ಬಿಡುಗಡೆ ಮಾಡಲು ಆದೇಶಿಸಿದ ನಂತರ ನಳಿನಿ ಕೂಡ ಅರ್ಜಿಯನ್ನು ಸಲ್ಲಿಸಿದ್ದಳು.

LEAVE A REPLY

Please enter your comment!
Please enter your name here

Most Popular

error: Content is protected !!