Saturday, December 10, 2022
spot_img
Homeಸುದ್ದಿಶಾಲೆಗಳಲ್ಲಿ ಇನ್ನು ದಿನಕ್ಕೆ ಮೂರು ಬಾರಿ ನೀರಿನ ಗಂಟೆ

ಶಾಲೆಗಳಲ್ಲಿ ಇನ್ನು ದಿನಕ್ಕೆ ಮೂರು ಬಾರಿ ನೀರಿನ ಗಂಟೆ

ಬೆಳಗ್ಗೆ 10.35 , ಮಧ್ಯಾಹ್ನ 12ಕ್ಕೆ , ಮಧ್ಯಾಹ್ನ 2ಕ್ಕೆ ಬಾರಿಸಲಿದೆ ಬೆಲ್‌

ಬೆಂಗಳೂರು : ಮಕ್ಕಳು ನಿಯಮಿತವಾಗಿ ನೀರು ಕುಡಿಯುವಂತೆ ಮಾಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಾಲೆಗಳಲ್ಲಿ ದಿನಕ್ಕೆ ಮೂರು ಬಾರಿ ನೀರಿನ ಗಂಟೆ ಬಾರಿಸಲು ಸೂಚಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಜ್ಯಾದ್ಯಂತ ಎಲ್ಲಾ ಮಂಡಳಿಗಳಿಗೆ ಸಂಯೋಜಿತವಾದ ಶಾಲೆಗಳಲ್ಲಿ ಈ ಹೊಸ ವ್ಯವಸ್ಥೆ ತರಲು ತೀರ್ಮಾನಿಸಿದೆ. ಈ ಪ್ರಯುಕ್ತ ಇಲಾಖೆ ಸಚಿವ ಬಿ.ಸಿ.ನಾಗೇಶ್ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಮಕ್ಕಳು ಶಾಲೆಗಳಲ್ಲಿ ಪಾಠ ಕೇಳುವಾಗ ಆಗಾಗ ಎದ್ದು ಹೋಗಿ ನೀರು ಕುಡಿಯುವುದು ತೀರಾ ಕಡಿಮೆ. ಆಟಕ್ಕೆ ಬಿಟ್ಟಾಗ, ಊಟದ ಸಮಯದಲ್ಲಿ ನೀರು ಕುಡಿಯುತ್ತಾರೆ. ವಿದ್ಯಾರ್ಥಿಗಳ ದೇಹದಲ್ಲಿ ನೀರಿನ ಕೊರತೆಯಿಂದ ನಿರ್ಜಲೀಕರಣ, ಹೊಟ್ಟೆ ನೋವು, ಒಣ ಗಂಟಲು ಮತ್ತು ತಲೆನೋವಿನಂಥ ಅನಾರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ. ಈ ಸಮಸ್ಯೆ ಮಕ್ಕಳಿಗೆ ಬರದಂತೆ ತಡೆಯಲು ಈ ಹೊಸ ವ್ಯವಸ್ಥೆ ತರಲು ಸರ್ಕಾರ ಸಜ್ಜಾಗಿದೆ. ಈ ಹೊಸ ವ್ಯವಸ್ಥೆಯಡಿ ರಾಜ್ಯದ ಶಾಲೆಗಳಲ್ಲಿ ಇನ್ನು ಮುಂದೆ ದಿನಕ್ಕೆ ಮೂರು ಬಾರಿ ನೀರಿನ ಗಂಟೆ ಬಾರಿಸಲಿದೆ.
ಕೇರಳದ ಶಾಲೆಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಇದೆ. ಈ ಮಾದರಿಯನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಅಂದಿನ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರ ಸಲಹೆಯನ್ನು ಅನುಸರಿಸಿ, 2019ರಲ್ಲಿ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಸ್ತಾವಿಸಿಸದ್ದರು. ಆದರೆ ಕೋವಿಡ್ ಹಿನ್ನೆಲೆ ಈ ಪರಿಕಲ್ಪನೆ ಅನುಷ್ಠಾನ ಸಾಧ್ಯವಾಗಿರಲಿಲ್ಲ.
ಬೆಳಗ್ಗೆ 10.35ಕ್ಕೆ ಮೊದಲ ಗಂಟೆ, ಎರಡನೆಯದ್ದು ಮಧ್ಯಾಹ್ನ 12ಕ್ಕೆ ಮತ್ತು ಮಧ್ಯಾಹ್ನ 2 ಗಂಟೆಗೆ ಮೂರನೇ ಗಂಟೆ ಬಾರಿಸಲು ವೇಳಾಪಟ್ಟಿ ಮಾಡಿಕೊಳ್ಳಲಾಗಿದೆ. ಸಚಿವ ಬಿ.ಸಿ.ನಾಗೇಶ್‌ ರಾಜ್ಯದ ಕೆಲ ಶಾಲೆಗಳಿಗೆ ಭೇಟಿ ನೀಡಿದ್ದ ವೇಳೆ ಶಿಕ್ಷಕರು ಮಕ್ಕಳಿಗೆ ನೀರು ಕುಡಿಯಲು ಬಿಡುತ್ತಿಲ್ಲ ಎಂದು ಪೋಷಕರು ಸಚಿವರಿಗೆ ತಿಳಿಸಿದ್ದರು. ಮಕ್ಕಳಿಗೆ ನೀರಿನ ಬಾಟಲಿಯಲ್ಲಿ ನೀರು ತುಂಬಿ ಕಳುಹಿಸಿದರೂ ಮರಳಿ ಮನೆಗೆ ಬಂದಾಗ ಅಷ್ಟೇ ನೀರು ಉಳಿದಿರುತ್ತವೆ ಎಂದು ಕೆಲವು ಪೋಷಕರು ಆರೋಪಿಸಿದ್ದರು.
ಶಾಲೆಯಲ್ಲಿ ಶಿಕ್ಷಕರು ನೀರು ಕುಡಿಯಲು ಬಿಡದಿರುವುದು, ಶಿಸ್ತು, ಇನ್ನಿತರ ಕಾರಣದಿಂದಾಗಿ ಮಕ್ಕಳ ದೇಹದಲ್ಲಿ ನೀರಿನ ಕೊರತೆ ಕಂಡು ಬರುತ್ತಿದೆ. ಅಲ್ಲದೇ ಬೇಸಿಗೆ ವೇಳೆ ಮಕ್ಕಳು ಆಟವಾಡಿ ಹೆಚ್ಚು ದಣಿಯುತ್ತಾರೆ. ಆಗ ಅವರಿಗೆ ಹೆಚ್ಚು ನೀರಿನ ಅಗತ್ಯವಿರುತ್ತದೆ. ಆದರೆ ನಿಯಮಿತವಾಗಿ ನೀರು ಕುಡಿಯುವುದಿಲ್ಲ. ಇದು ಹೀಗೆ ಮುಂದುವರಿದರೆ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಹೊಸ ವ್ಯವಸ್ಥೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!