Tuesday, December 6, 2022
spot_img
Homeಸುದ್ದಿಕಾರ್ಕಳದಲ್ಲಿ ದೀಪೋತ್ಸವದ ರಂಗು

ಕಾರ್ಕಳದಲ್ಲಿ ದೀಪೋತ್ಸವದ ರಂಗು

ವರದಿ: ನಳಿನಿ ಎಸ್‌. ಸುವರ್ಣ

ಕಾರ್ಕಳ : ಸುಮಾರು 550 ವರ್ಷಗಳ ಇತಿಹಾಸವಿರುವ ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನದ ದೀಪೋತ್ಸವವು ಅತ್ಯಂತ ಪ್ರಸಿದ್ದವಾದುದಾಗಿದೆ. ಈ ಬಾರಿ ನ. 13ರಂದು ಕೆರೆದೀಪ ಮತ್ತು ನ. 14ರಂದು ಲಕ್ಷದೀಪೋತ್ಸವ ನಡೆಯಲಿದೆ. ಈಗಾಗಲೇ ದೀಪೋತ್ಸವದ ತಯಾರಿಯು ವಿಜೃಂಭಣೆಯಿಂದ ನಡೆಯುತ್ತಿದೆ. ಅ. 26ರಂದು ಬಲೀಂದ್ರ ಪೂಜೆಯಿಂದ ಕಾರ್ತಿಕ ಮಾಸ ಆರಂಭಗೊಂಡಿದೆ. ಅ. 3 ರಂದು ಚಾತುರ್ಮಾಸ ಸಮಾಪ್ತಿ, 4ರಂದು ಕ್ಷೀರಬ್ಧಿ ಪೂಜೆ ಮತ್ತು ಏಕಾಹ ಭಜನೆ 5ರಂದು ಉತ್ಥಾನ ದ್ವಾದಶಿ ಪೂಜೆ ನಡೆದಿದೆ.

ಕೆರೆದೀಪ : ವೆಂಕಟರಮಣ ದೇವಸ್ಥಾನದಲ್ಲಿ ನ. 13 ರಂದು ಕೆರೆದೀಪ ನಡೆಯಲಿದೆ. ರಾತ್ರಿ 8:30 ಗಂಟೆಗೆ ಪೂಜೆಯಾಗಿ ದೇವಸ್ಥಾನದಿಂದ ಹೊರಟ ದೇವರ ಉತ್ಸವವು ಮಣ್ಣ ಗೋಪುರದವರೆಗೆ ಹೋಗಿ ಅಲ್ಲಿಂದ ಮತ್ತೆ ಮರಳಿ ಹೊರಟು ದೇಗುಲದ ಕೆರೆಗೆ ಬರುತ್ತದೆ. ಕೆರೆಯಲ್ಲಿ ದೇವರಿಗೆ ಕೆರೆ ದೀಪೋತ್ಸವದ ಬಳಿಕ ದೇವರನ್ನು ದೇವಸ್ಥಾನದೊಳಗೆ ಕರೆದುಕೊಂಡು ಹೋಗುತ್ತಾರೆ.

ಲಕ್ಷದೀಪೋತ್ಸವ: ನ. 14 ರಂದು ಲಕ್ಷದೀಪೋತ್ಸವ ನಡೆಯಲಿದ್ದು, ಅಂದು ಬೆಳಗ್ಗೆ 10 ಗಂಟೆಗೆ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಪ್ರಾರ್ಥನೆ ನಡೆಯುತ್ತದೆ. ನಂತರ ದೇವರನ್ನು ಬಂಗಾರದ ಪಲ್ಲಕಿಯ ಮಂಟಪದಲ್ಲಿ ಕುಳ್ಳಿರಿಸಿ ವನಕ್ಕೆ ಹೊರಡುವುದು. ವರ್ಷಕ್ಕೆ ಒಂದು ಬಾರಿ ಈ ಸಂದರ್ಭದಲ್ಲಿ ಶ್ರೀನಿವಾಸ ಮತ್ತು ವೆಂಕಟರಮಣ ಎರಡೂ ದೇವರು ಒಟ್ಟಿಗೆ ಹೊರಡುತ್ತಾರೆ. ವನಭೋಜನದಲ್ಲಿ ಪೂಜೆ ಅಭಿಷೇಕ ಆದ ಬಳಿಕ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ನಡೆಯುತ್ತದೆ. ನಂತರ ಅಲ್ಲಿಂದ ಹೊರಟ ದೇವರನ್ನು ಮಣ್ಣ ಗೋಪುರದಲ್ಲಿ ಕುಳ್ಳಿರಿಸಿ ಭಕ್ತಾದಿಗಳಿಗೆ ದೇವರ ದರ್ಶನವಾಗುತ್ತದೆ. ಅಲ್ಲಿಂದ ರಾತ್ರಿ ಒಂದು ಗಂಟೆಗೆ ಹೊರಟ ಉತ್ಸವವು ವೆಂಕಟರಮಣ ದೇವಸ್ಥಾನಕ್ಕೆ ಮುರುದಿನ ಬೆಳಗ್ಗೆ 6 ಗಂಟೆಗೆ ತಲುಪುತ್ತದೆ.

ಕಾರ್ತಿಕ ಬಹುಳ ಷಷ್ಠಿ-ಅವಭೃತ
ನ. 15 ರಂದು ಬೆಳಿಗ್ಗೆ ಪೂಜೆ, ಪ್ರಾರ್ಥನೆ, ಅಭಿಷೇಕ ನಡೆಯುತ್ತದೆ. ಸಾಯಂಕಾಲ 4 ಗಂಟೆಗೆ ಪ್ರಾರ್ಥನೆಯಾಗಿ ಅವಭೃತ ಪ್ರಾರಂಭವಾಗಿ ದೇವಸ್ಥಾನದಿಂದ ರಾಮಸಮುದ್ರಕ್ಕೆ ಉತ್ಸವವು ಹೊರಡುತ್ತದೆ. ಈ ಸಂದರ್ಭ ಅಲ್ಲಲ್ಲಿ ಮನೆಗಳ ಮುಂದೆ ಓಕುಳಿಯನ್ನು ಸಿದ್ಧಗೊಳಿಸಿ ಇಟ್ಟಿರುತ್ತಾರೆ. ಜನರು ಅದನ್ನು ಮಿಂದು ಮುಂದೆ ತೆರಳುವರು. ದೇವರ ಪ್ರತಿಮೆಯನ್ನು ತಲೆಯ ಮೇಲೆ ಹೊತ್ತು ಅರ್ಚಕರು ರಾಮಸಮುದ್ರದ ನೀರಿನಲ್ಲಿ ಮುಳುಗಿ ದೇವರಿಗೆ ಸ್ನಾನ ಮಾಡಿಸುತ್ತಾರೆ. ನಂತರದಲ್ಲಿ ಮರಳಿ ಹೊರಟ ಉತ್ಸವವು ಅನಂತಶಯನದ ಪದ್ಮಾವತಿ ದೇವಸ್ಥಾನದಲ್ಲಿ ನಿಂತು ಅಲ್ಲಿ ಪೂಜೆ ನಡೆದು ಪ್ರಸಾದ ವಿತರಣೆಯಾದ ಬಳಿಕ ಉತ್ಸವವು ಮತ್ತೆ ಹೊರಟು ದಾರಿಯಲ್ಲಿ ಭಕ್ತರಿಂದ ಹಣ್ಣುಕಾಯಿ, ಆರತಿಗಳನ್ನು ಸ್ವೀಕರಿಸುತ್ತಾ ಸುಮಾರು ರಾತ್ರಿ 9 ಗಂಟೆಗೆ ದೇವಸ್ಥಾನಕ್ಕೆ ಆಗಮನವಾಗಲಿದೆ. ನಂತರ ದೇವಸ್ಥಾನದಲ್ಲಿ ಭಕ್ತಾದಿಗಳಿಂದ ಉರುಳು ಸೇವೆ ನಡೆಯುತ್ತದೆ.

ಮನೆ-ಮನದಲ್ಲಿ ತುಂಬಿದ ಸಂಭ್ರಮ
ಲಕ್ಷದೀಪೋತ್ಸವದ ತಯಾರಿಯಾಗಿ ರಥಬೀದಿಯಲ್ಲಿ ಗುರ್ಜಿಗಳ ನಿರ್ಮಾಣವಾಗಿದೆ. ರಸ್ತೆ ಬದಿಯಲ್ಲಂತೂ ವಿವಿಧೆಡೆಯಿಂದ ಬಂದ ಸಂತೆ ವ್ಯಾಪಾರಿಗಳು ಅಂಗಡಿ ಹಾಕಿಕೊಂಡಿದ್ದಾರೆ. ಹೂ, ಪೂಜಾ ಸಾಮಗ್ರಿಗಳ ಅಂಗಡಿಗಳಂತು ಜನ ದಟ್ಟನೆಯಿಂದ ತುಂಬಿದೆ. ಸಂಜೆಯಾದರೆ ದೇಗುಲದ ಮುಂಭಾಗದಲ್ಲಿ ಭಕ್ತ ಸಾಗರವೇ ತುಂಬಿರುತ್ತದೆ. ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ವಾಹನ ಸಂಚಾರದ ಪರದಾಟದ ನಡುವೆಯೂ ದೀಪೋತ್ಸವದ ಸಂಭ್ರಮ ಕಾರ್ಕಳ ಜನತೆಯ ಮನೆ-ಮನ ತುಂಬಿದೆ.

LEAVE A REPLY

Please enter your comment!
Please enter your name here

Most Popular

error: Content is protected !!