ಹೆಬ್ರಿ : ಉಡುಪಿ ಶಿವಮೊಗ್ಗ ಜಿಲ್ಲೆಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಹೆಬ್ರಿ ತಾಲೂಕಿನ ಸೋಮೇಶ್ವರ ಚೆಕ್‌ಪೋಸ್ಟ್‌ಗೆ ದಾನಿಗಳ ನೆರವಿನೊಂದಿಗೆ ಅಳವಡಿಸಲಾದ ಎಎನ್‌ಪಿಆರ್ (Automatic number-plate recognition) ಕ್ಯಾಮರಾವನ್ನು ಶನಿವಾರ ಲೋಕಾರ್ಪಣೆಗೊಳಿಸಲಾಯಿತು. 1.28 ಲಕ್ಷ ರೂ. ವೆಚ್ಚದ ಉತ್ತಮ ಗುಣಮಟ್ಟದ ಎರಡು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಇದರ ವಿಶೇಷತೆ ಏನೆಂದರೆ ಚೆಕ್ ಪೋಸ್ಟ್ ಮೂಲಕ ಸಾಗುವ ವಾಹನಗಳ ನಂಬರ್ ಪ್ಲೇಟ್ ಸ್ಪಷ್ಟವಾಗಿ ಚಿತ್ರೀಕರಿಸುತ್ತದೆ. ಈ ಮೂಲಕ ಅಪರಾಧ ಪತ್ತೆ ಹಚ್ಚಲು ಮತ್ತು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆಗೆ ನೆರವಾಗಲಿದೆ.
ಕಡಿವಾಣ
ಎಎನ್‌ಪಿಆರ್ ಅಳವಡಿಕೆಯಿಂದಾಗಿ ಹೆಬ್ರಿ ಭಾಗದಲ್ಲಿ ನಡೆಯುವ ಕಳ್ಳತನ, ಅಕ್ರಮ ಗೋಸಾಗಾಟಕ್ಕೆ ಕಡಿವಾಣ, ಮರಳು ತುಂಬಿಕೊಂಡು ಮಿತಿ ಮೀರಿದ ವೇಗದಲ್ಲಿ ಓಡುವ ಲಾರಿಗಳಿಗೂ ಬ್ರೇಕ್ ಬೀಳಲಿದೆ. ಹೆಬ್ರಿ ಭಾಗದಲ್ಲಿ ನಡೆಯುವ ಅಕ್ರಮ ಚಟುವಟಿಕೆ, ಅಪರಾಧ ಕೇಸ್‌ಗಳಲ್ಲಿ ಭಾಗಿಯಾಗಿ ಪರಾರಿಗೆ ಯತ್ನಿಸುವ ವ್ಯಕ್ತಿಗಳು ಇನ್ನು ಮುಂದೆ ಕ್ಯಾಮರಾ ಕಣ್ಣಿನಿಂದ ತಪ್ಪಿಸಿಕೊಳ್ಳಲಾರರು.
ಸಿಸಿಟಿವಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಾರ್ಕಳ ಸರ್ಕಲ್ ಇನ್ಸ್‌ಪೆಕ್ಟರ್ ಸಂಪತ್ ಕುಮಾರ್, ಹೆಬ್ರಿ ಠಾಣಾಧಿಕಾರಿ ಸುದರ್ಶನ್ ದೊಡಮನಿ, ಜಿ.ಪಂ. ನಿಕಟ ಪೂರ್ವ ಸದಸ್ಯೆ ಜ್ಯೋತಿ ಹರೀಶ್, ದಾನಿ ಶೋಧನ್ ಕುಮಾರ್ ಹೆಗ್ಡೆ, ನಾಡ್ಪಾಲು ಗ್ರಾ. ಪಂ. ಉಪಾಧ್ಯಕ್ಷ ನವೀನ್ ಕುಮಾರ್, ಹೆಬ್ರಿ ಗ್ರಾ. ಪಂ. ಸದಸ್ಯರಾದ ಸುಧಾಕರ ಹೆಗ್ಡೆ ಮತ್ತು ತಾರನಾಥ ಬಂಗೇರ ಮತ್ತು ಕಾಡಿನಮನೆ ವಿಜಯ ಶೆಟ್ಟಿ ಉಪಸ್ಥಿತರಿದ್ದರು.