ಆರೋಗ್ಯ ಧಾರಾ _ ಆಯುರ್ವೇದವೆಂದರೆ ಮನೆ ಮದ್ದು ಮಾತ್ರವಲ್ಲ…


ಆಯುರ್ವೇದ ಔಷಧ ಎಂದರೆ ಬರೀ ಮನೆ ಮದ್ದು ಅಥವಾ ಗಿಡಮೂಲಿಕೆಗಳಿಂದ ತಯಾರಿಸಿದ ಮದ್ದು ಎಂದು ಹಲವರು ತಿಳಿದುಕೊಂಡಿದ್ದಾರೆ. ಆಯುರ್ವೇದ ವೈದ್ಯರು ಲೇಖನಗಳಲ್ಲಿ ಮನೆಮದ್ದುಗಳನ್ನು ತಿಳಿಸುವುದು ಏಕೆಂದರೆ ಜನರಿಗೆ ಸಾಮಾನ್ಯ ಕಾಯಿಲೆಗಳಾದಾಗ ಮನೆಯಲ್ಲಿ ಸಿಗುವಂತಹ ಸಾಮಗ್ರಿಗಳಿಂದ ಉಪಚಾರ ಮಾಡಬಹುದು ಎಂದು. ಅಡುಗೆಯಲ್ಲಿ ಬಳಸುವಂತಹ ಮಸಾಲೆ ಪದಾರ್ಥಗಳಲ್ಲಿ, ಮನೆಯಲ್ಲಿ ಬೆಳೆಸುವಂತಹ ಗಿಡಗಳಲ್ಲಿ ಔಷಧೀಯ ಗುಣಗಳಿವೆ ಎಂಬುದನ್ನು ತಿಳಿಸುವುದಕ್ಕೆ. ಆದರೆ ಇದರ ಅರ್ಥ ಆಯುರ್ವೇದದಲ್ಲಿ ಬರೀ ಮನೆಮದ್ದು ಹಾಗೂ ಗಿಡ ಮೂಲಿಕೆಗಳಿಂದ ತಯಾರಾದ ಔಷಧಿಗಳು ಎಂದು ತಪ್ಪು ತಿಳಿದುಕೊಂಡಿದ್ದಾರೆ.ಆಯುರ್ವೇದ ಗ್ರಂಥಗಳಲ್ಲಿ ಹೇಳಿರುವಷ್ಟು ಎಲ್ಲ ಔಷಧಗಳನ್ನು ತಯಾರಿಸಲು ಈ ಒಂದು ಜನ್ಮ ಸಾಕಾಗುವುದಿಲ್ಲ. ಸಾವಿರಗಟ್ಟಲೆ ಮದ್ದುಗಳು ನಮ್ಮ ಸಂಹಿತೆಗಳಲ್ಲಿ ಸಿಗುತ್ತವೆ. ಅದರಲ್ಲಿ ಇರುವಂತಹ ಕೆಲವನ್ನು ಮಾತ್ರ ಹೆಕ್ಕಿ ಈಗಿನ ಕಾಲದಲ್ಲಿ ಬೇಕಾದ ಈಗಿನ ಕಾಲದಲ್ಲಿ ಸಿಗುವ ಸಾಮಗ್ರಿಗಳನ್ನು ಔಷಧಿ ದ್ರವ್ಯಗಳನ್ನು ಬಳಸಿ ಹಲವಾರು ಕಂಪೆನಿಗಳು ಆಯುರ್ವೇದ ಔಷಧಗಳನ್ನು ತಯಾರಿಸುತ್ತಿವೆ.
ಆಯುರ್ವೇದವು ಮೊದಲಿಗೆ ನಮ್ಮ ಜೀವನ ಶೈಲಿಗೆ ಮಹತ್ವ ನೀಡುತ್ತದೆ. ದಿನಚರ್ಯ, ಋತುಚರ್ಯ, ರಾತ್ರಿಚರ್ಯ, ಸ್ವಸ್ಥ ವೃತ್ತ, ಸದ್ವೃತ್ತ ಜೀವನದಲ್ಲಿ ಪಾಲಿಸ ಬೇಕಾದ ಕೌಶಲವನ್ನು ತಿಳಿಸಿಕೊಡುತ್ತದೆ. ನಮ್ಮ ದೇಹ ಹಾಗೂ ಮನಸ್ಸು ಸ್ವಸ್ಥವಿದ್ದರೆ ರೋಗ ದೂರ ಸರಿಯುತ್ತದೆ. ಋತುವಿಗೆ ತಕ್ಕಂತೆ ಆಹಾರ, ಸರಿಯಾದ ನಿದ್ದೆ, ಕ್ರಿಯಾಶೀಲವಾದ ಜೀವನಶೈಲಿ, ಯೋಗಾಸನ, ಪ್ರಾಣಾಯಾಮ ಮಾಡುವುದರಿಂದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು.
ಆಯುರ್ವೇದ ಔಷಧದ ಬಗ್ಗೆ ತಿಳಿದುಕೊಳ್ಳೋಣ. ಆಯುರ್ವೇದ ಔಷಧಗಳಾದ ವಟಿ, ಕಷಾಯ, ಘೃತ, ಅರಿಷ್ಟ, ಆಸವ, ಚೂರ್ಣಗಳನ್ನು ಗಿಡ ಮೂಲಿಕೆಗಳಿಂದ ತಯಾರಿಸಲಾದಂತಹ ಔಷಧಗಳು. ಉದಾಹರಣೆಗೆ ಚಂದ್ರಪ್ರಭಾ ವಟಿ, ರಾಸ್ನಾದಿ ಕಷಾಯ, ಅರವಿಂದಾಸವ, ಕುಟಜಾರಿಷ್ಟ, ತಾಲೀಸಾದಿ ಚೂರ್ಣ ಮುಂತಾದವುಗಳು.
ಇನ್ನು ಪಾದರಸ, ಅಭ್ರಕ, ಶಿಲಾಜಿತು, ಗಂಧಕಗಳಂತಹ ಲೋಹಗಳಿಂದ ಖನಿಜಗಳಿಂದ ಹಾಗೂ ಹವಳ, ವಜ್ರದಂತಹ ರತ್ನಗಳಿಂದ ಔಷಧಗಳನ್ನು ತಯಾರಿಸಲಾಗುತ್ತದೆ. ಇವುಗಳಿಗೆ ರಸೌಷಧಿಗಳೆಂದು ಹೆಸರು. ಇವುಗಳನ್ನು ಸರಿಯಾದ ರೀತಿಯಲ್ಲಿ ಶುದ್ಧೀಕರಿಸಿ, ಸಂಸ್ಕರಿಸಿ, ಅದರಲ್ಲಿರುವ ಅನಗತ್ಯ ಪದಾರ್ಥಗಳನ್ನು ಬೇರ್ಪಡಿಸಿ ಅಗತ್ಯವಾದ ದ್ರವ್ಯಗಳನ್ನು ಸೇವಿಸಿ ಔಷಧಗಳನ್ನು ತಯಾರಿಸಲಾಗುವುದು. ಉದಾಹರಣೆಗೆ ಬೃಹತ್ ವಾತ ಚಿಂತಾಮಣಿ ರಸ, ತ್ರಿಭುವನ ಕೀರ್ತಿ ರಸ, ರಜತ ಭಸ್ಮ, ಸುವರ್ಣಭಸ್ಮ, ವಜ್ರ ಭಸ್ಮ, ಸ್ವರ್ಣ ಪರ್ಪಟಿ ಇತ್ಯಾದಿಗಳು.
ಆಯುರ್ವೆದದಲ್ಲಿ ಅಭ್ಯಂಗ ಹಾಗೂ ಪಂಚಕರ್ಮಕ್ಕೆ ವಿಶೇಷ ಸ್ಥಾನವಿದೆ . ಇದರಿಂದ ಅನೇಕ ರೋಗಗಳನ್ನು ಗುಣಪಡಿಸಲಾಗುವುದು. ವಮನ(ವಾಂತಿ ಮಾಡಿಸುವುದ) ವಿರೇಚನ (ಭೇದಿ) ನಸ್ಯ(ಮೂಗಿನಿಂದ ಔಷಧಿ ದ್ರವ್ಯಗಳನ್ನು ಹಾಕುವುದು) ಬಸ್ತಿ (enema) ರಕ್ತಮೋಕ್ಷಣ (ಅಶುದ್ಧವಾದ ರಕ್ತವನ್ನು ತೆಗೆಯುವುದು). ಇದು ಆಯುರ್ವೇದ ಔಷಧದ ಸಂಕ್ಷಿಪ್ತ ಪರಿಚಯ.
ಡಾ.ಹರ್ಷಾ ಕಾಮತ್
ಖ್ಯಾತ ಆಯುರ್ವೇದ ತಜ್ಞರು





























































error: Content is protected !!
Scroll to Top