Saturday, December 10, 2022
spot_img
Homeಸುದ್ದಿಮತಾಂತರಗೊಂಡವರಿಗೆ ಎಸ್‌ಸಿ ಸೌಲಭ್ಯವಿಲ್ಲ

ಮತಾಂತರಗೊಂಡವರಿಗೆ ಎಸ್‌ಸಿ ಸೌಲಭ್ಯವಿಲ್ಲ

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸರಕಾರ ಪ್ರತಿಪಾದನೆ

ಹೊಸದಿಲ್ಲಿ : ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಅಸ್ಪೃಶ್ಯತೆಯ ಕಾಟ ಇಲ್ಲದಿರಿವುದರಿಂದ ಅವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ ಅವಕಾಶ ನೀಡಬಾರದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರು ಪರಿಶಿಷ್ಟ ಜಾತಿಗಳಿಗೆ ಅರ್ಹರಾಗಿರುವ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅಫಿಡವಿಟ್‌ನಲ್ಲಿ 1950ರ ಸಂವಿಧಾನ (ಪರಿಶಿಷ್ಟ ಜಾತಿಗಳು) ಪ್ರಕಾರ ಮತಾಂತರಿಗಳಿಗೆ ಪರಿಶಿಷ್ಟ ಜಾತಿ ಸೌಲಭ್ಯ ನಿರಾಕರಿಸುವುದು ಅಸಂವಿಧಾನಿಕವಲ್ಲ ಎಂದು ಹೇಳಿದೆ.
ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತ ಸಮುದಾಯಗಳ ಜನರಿಗೆ ಮೀಸಲಾತಿ ಮತ್ತು ಇತರ ಪ್ರಯೋಜನಗಳನ್ನು ವಿಸ್ತರಿಸಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಗಳಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್ ಸಲ್ಲಿಸಲಾಗಿದೆ. ಪರಿಶಿಷ್ಟ ಜಾತಿಗಳ ಗುರುತಿಸುವಿಕೆಯು ಸಂವಿಧಾನದ (ಪರಿಶಿಷ್ಟ ಜಾತಿಗಳು) ಆದೇಶ, 1950 ರಲ್ಲಿ ಗುರುತಿಸಲಾದ ಸಮುದಾಯಗಳಿಗೆ ಸೀಮಿತವಾದ ನಿರ್ದಿಷ್ಟ ಸಾಮಾಜಿಕ ಕಳಂಕದ ಸುತ್ತ ಕೇಂದ್ರೀಕೃತವಾಗಿದೆ ಎಂದು ಸಚಿವಾಲಯವು ತಿಳಿಸಿದೆ.
ಈ ಆದೇಶವು ಐತಿಹಾಸಿಕ ದತ್ತಾಂಶವನ್ನು ಆಧರಿಸಿದೆ. ಇದು ಕ್ರಿಶ್ಚಿಯನ್ ಅಥವಾ ಇಸ್ಲಾಮಿಕ್ ಸಮಾಜದ ಸದಸ್ಯರು ಅಂತಹ ಹಿಂದುಳಿದಿರುವಿಕೆ ಅಥವಾ ದಬ್ಬಾಳಿಕೆಯನ್ನು ಎಂದಿಗೂ ಎದುರಿಸಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ ಎಂದು ಅದು ಹೇಳಿದೆ. ವಾಸ್ತವವಾಗಿ, ಪರಿಶಿಷ್ಟ ಜಾತಿಗಳ ಜನರು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮದಂತಹ ಧರ್ಮಗಳಿಗೆ ಮತಾಂತರಗೊಳ್ಳಲು ಒಂದು ಕಾರಣವೆಂದರೆ ಅವರು ಕ್ರಿಶ್ಚಿಯನ್ ಧರ್ಮ ಅಥವಾ ಇಸ್ಲಾಂನಲ್ಲಿ ಚಾಲ್ತಿಯಲ್ಲಿಲ್ಲದ ಅಸ್ಪೃಶ್ಯತೆಯ ದಬ್ಬಾಳಿಕೆಯ ವ್ಯವಸ್ಥೆಯಿಂದ ಹೊರಬರಲು ಎಂದು ಅಫಿಡವಿಟ್ ಹೇಳಿದೆ.

LEAVE A REPLY

Please enter your comment!
Please enter your name here

Most Popular

error: Content is protected !!