Saturday, December 10, 2022
spot_img
Homeಸುದ್ದಿಬಂಧನ ಭೀತಿಯಲ್ಲಿ ಬಾಲಿವುಡ್‌ ನಟಿ ಜಾಕಲಿನ್‌ ಫರ್ನಾಂಡಿಸ್‌

ಬಂಧನ ಭೀತಿಯಲ್ಲಿ ಬಾಲಿವುಡ್‌ ನಟಿ ಜಾಕಲಿನ್‌ ಫರ್ನಾಂಡಿಸ್‌

ಇಷ್ಟರ ತನಕ ಬಂಧಿಸದ ಇಡಿಗೆ ನ್ಯಾಯಾಲಯ ತೀವ್ರ ತರಾಟೆ

ಹೊಸದಿಲ್ಲಿ : ಬಹುಕೋಟಿ ವಂಚಕ ಸುಕೇಶ್‌ ಚಂದ್ರಶೇಖರ್‌ ಗೆಳೆತನ ಮಾಡಿ ಅವನ ಕೃತ್ಯಗಳಲ್ಲಿ ಸಹಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಬಾಲಿವುಡ್‌ನ ಜನಪ್ರಿಯ ನಟಿ ಜಾಕಲಿನ್‌ ಫರ್ನಾಂಡಿಸ್‌ಗೆ ಬಂಧನ ಭೀತಿ ಎದುರಾಗಿದೆ. ಗುರುವಾರ ನಡೆದ ವಿಚಾರಣೆಯಲ್ಲಿ ಇಷ್ಟರ ತನಕ ನಟಿಯನ್ನು ಬಂಧಿಸದ ಜಾರಿ ನಿರ್ದೇಶನಾಲಯವನ್ನು ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಪೊಲೀಸರು ಕೈಕೋಳದೊಂದಿಗೆ ನಟಿಯ ಮನೆಯ ಬಾಗಿಲು ಬಡಿಯುವ ಸಾಧ್ಯತೆಯಿದೆ.
ಜಾರಿ ನಿರ್ದೇಶನಾಲಯ ನಟಿಯ ಪ್ರಕರಣಕ್ಕೆ ಸಂಬಂಧಿಸಿ ಪಿಕ್ ಅಂಡ್ ಚೂಸ್ ನೀತಿಯನ್ನು ಅಳವಡಿಸಿಕೊಂಡಿದೆ.
200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಆರೋಪಿ ಸುಕೇಶ್ ಚಂದ್ರಶೇಖರ್ ವಿರುದ್ಧ ಲುಕ್‌ಔಟ್ ನೋಟಿಸ್‌ ಹೊರಡಿಸಿದ್ದರೂ ನಟಿ ಜಾಕಲಿನ್ ಫರ್ನಾಂಡಿಸ್‌ಳನ್ನು ಏಕೆ ಬಂಧಿಸಲಿಲ್ಲ ಎಂದು ನ್ಯಾಯಾಲಯ ತನಿಖಾ ಸಂಸ್ಥೆಯನ್ನು ತೀಕ್ಷ್ಣವಾಗಿ ಪ್ರಶ್ನಿಸಿದೆ.
ನೋಟಿಸ್‌ ನೀಡಿದ್ದರೂ ನಟಿಯನ್ನು ಏಕೆ ಬಂಧಿಸಲಿಲ್ಲ? ಒಬ್ಬೊಬ್ಬರಿಗೆ ಒಂದೊಂದು ನೀತಿ ಏಕೆ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ. 200 ಕೋಟಿ ರೂ. ಸುಲಿಗೆ ಪ್ರಕರಣದ ಆರೋಪಿ ಸುಕೇಶ್‌ ಚಂದ್ರಶೇಖರ್‌, ನಟಿಗೆ 7.14 ಕೋಟಿ ರೂ. ಮೌಲ್ಯದ ಉಡುಗೊರೆ ನೀಡಿದ್ದಾನೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಕೋಟ್ಯಂತರ ಅವ್ಯವಹಾರದ ತನಿಖೆಗೆ ನಟಿ ಸಹಕಾರ ನೀಡುತ್ತಿಲ್ಲ. ದೇಶ ಬಿಟ್ಟು ಓಡಿ ಹೋಗುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಜಾಮೀನು ಮಂಜೂರು ಮಾಡಬಾರದು ಎಂದು ಜಾರಿ ನಿರ್ದೇಶನಾಲಯದ ಪರ ವಕೀಲರು ವಾದಿಸಿದರು.
ನಟಿ ದೇಶ ತೊರೆಯುವುದನ್ನು ತಡೆಯಲು ವಿಮಾನ ನಿಲ್ದಾಣಗಳಿಗೆ ಲುಕ್‌ಔಟ್ ನೋಟಿಸ್‌ ಹೊರಡಿಸಲಾಗಿದೆ ಎಂದು ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ. ಈಗಾಗಲೇ ತನಿಖೆ ಪೂರ್ಣಗೊಂಡು ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವುದರಿಂದ ಆಕೆಯ ಕಸ್ಟಡಿ ಅಗತ್ಯವಿಲ್ಲ ಎಂದು 50,000 ವೈಯಕ್ತಿಕ ಬಾಂಡ್ ಮೇಲೆ ನ್ಯಾಯಾಲಯವು ಸೆಪ್ಟೆಂಬರ್ 26 ರಂದು ಮಧ್ಯಂತರ ಜಾಮೀನು ನೀಡಿತ್ತು.

LEAVE A REPLY

Please enter your comment!
Please enter your name here

Most Popular

error: Content is protected !!