Saturday, December 10, 2022
spot_img
Homeಸುದ್ದಿಅಡಿಲೇಡ್‌ನಲ್ಲಿ ಇಂದು ಭಾರತಕ್ಕೆ ಇಂಗ್ಲೆಂಡ್‌ ಎದುರಾಳಿ

ಅಡಿಲೇಡ್‌ನಲ್ಲಿ ಇಂದು ಭಾರತಕ್ಕೆ ಇಂಗ್ಲೆಂಡ್‌ ಎದುರಾಳಿ

ಗೆದ್ದ ತಂಡ ಫೈನಲ್‌ನಲ್ಲಿ ಪಾಕ್‌ ವಿರುದ್ಧ ಸೆಣಸಬೇಕು

ಅಡಿಲೇಡ್‌ : ಅಡಿಲೇಡ್​ನ ಓವಲ್ ಮೈದಾನದಲ್ಲಿ ಇಂದು ದ್ವಿತೀಯ ಸೆಮಿ ಫೈನಲ್ ಪಂದ್ಯ ನಡೆಯಲಿದ್ದು, ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿ ಆಗಲಿವೆ. ಈ ಪಂದ್ಯದಲ್ಲಿ ಗೆಲ್ಲುವ ಟೀಮ್ ಎರಡನೇ ತಂಡವಾಗಿ ಫೈನಲ್ ಪ್ರವೇಶಿಸಿ ಪಾಕ್ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅಡಿಲೇಡ್​ನಲ್ಲಿ ಹೈ ವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಗೆಲ್ಲುವ ವಿಶ್ವಾಸದಲ್ಲಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈಗಾಗಲೇ ನಾವು ಇಂಗ್ಲೆಂಡ್ ವಿರುದ್ಧ ಗೆದ್ದಿದ್ದೇವೆ ಎಂದಿದ್ದಾರೆ. ಭಾರತ ತಂಡ ಅಡಿಲೇಡ್​ನ ಓವಲ್​ ಮೈದಾನದಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದಿದೆ. ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶಕ್ಕೆ ಸೋಲುಣಿಸಿದೆ. ಈ ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಎದುರಾಗಿರುವ ಉಭಯ ತಂಡಗಳಿಗೆ ಅಡಿಲೇಡ್​ ಮೈದಾನ ಯಾರಿಗೆ ವರವಾಗಲಿದೆ ಎಂಬುದು ರೋಚಕತೆ ಸೃಷ್ಟಿಸಿದೆ. 2014ರ ವಿಶ್ವಕಪ್ ಟೂರ್ನಿಯ ನಂತರ ಭಾರತ ತಂಡವು ಫೈನಲ್‌ ಪ್ರವೇಶಿಸಿಲ್ಲ. ಅಲ್ಲದೇ 2013ರ ನಂತರ ಯಾವುದೇ ಐಸಿಸಿ ಟ್ರೋಫಿಯನ್ನೂ ಜಯಿಸಿಲ್ಲ. ರೋಹಿತ್ ನಾಯಕತ್ವಕ್ಕೆ ಇದೊಂದು ಉತ್ತಮ ಅವಕಾಶವಾಗಿದೆ.
ಭಾರತದ ಪ್ರಮುಖ ಅಸ್ತ್ರ ಬ್ಯಾಟರ್​ಗಳೇ. ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಅಮೋಘ ಫಾರ್ಮ್​ನಲ್ಲಿದ್ದಾರೆ. ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್ ಪಂತ್ ಅಥವಾ ದಿನೇಶ್ ಕಾರ್ತಿಕ್ ಪೈಕಿ ಸ್ಥಾನ ಪಡೆದುಕೊಳ್ಳುವವರು ಕೂಡ ಇಂದಿನ ಪಂದ್ಯದಲ್ಲಿ ಅಬ್ಬರಿಸಿದರೆ ಇಂಗ್ಲೆಂಡ್​ಗೆ ಸವಾಲಾಗುವುದು ಖಚಿತ. ಈ ಬಾರಿಯ ಟೂರ್ನಿಯಲ್ಲಿ ಭಾರತದ ಬೌಲರ್​ಗಳು ಉತ್ತಮ ಆರಂಭ ಒದಗಿಸಿದ್ದಾರೆ. ಆದರೆ, ಮಧ್ಯಮ ಓವರ್ ಮತ್ತು ಡೆತ್ ಓವರ್​ನಲ್ಲಿ ಇನ್ನಷ್ಟು ಸುಧಾರಣೆಯ ಅಗತ್ಯ ಇದೆ.
ಇತ್ತ ಇಂಗ್ಲೆಂಡ್ ಪರ ಬ್ಯಾಟರ್​ ಡೇವಿಡ್​ ಮಲಾನ್​, ಬೌಲರ್​ ಮಾರ್ಕ್​ವುಡ್​ ಗಾಯಗೊಂಡಿದ್ದು ತಂಡಕ್ಕೆ ಹಿನ್ನಡೆ ಆಗಿದೆ. ಬ್ಯಾಟರ್​ಗಳು ಸ್ಥಿರ ಪ್ರದರ್ಶನ ನೀಡದಿರುವುದು ಕೂಡ ಮೈನಸ್​ ಆಗಿದೆ. ಅಲೆಕ್ಸ್​ ಹೇಲ್ಸ್, ನಾಯಕ ಜೋಸ್​ ಬಟ್ಲರ್​, ಆಲ್​ರೌಂಡರ್​ಗಳಾದ ಬೆನ್​ ಸ್ಟೋಕ್ಸ್​, ಲಿಯಾಮ್​ ಲಿವಿಂಗ್​ಸ್ಟೋನ್​, ಮೊಯಿನ್​ ಅಲಿ ಸಿಡಿಯಬೇಕಿದೆ. ಬೌಲಿಂಗ್​ನಲ್ಲಿ ಕ್ರಿಸ್​ ವೋಕ್ಸ್​, ಸ್ಯಾಮ್​ ಕರ್ರನ್​, ಡೇವಿಡ್​ ವಿಲ್ಲೆ ವಿಕೆಟ್​ ಉದುರಿಸಬೇಕಿದೆ.
ಅಡಿಲೇಡ್ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚು ಅಚ್ಚುಮೆಚ್ಚು. ಬ್ಯಾಟ್​ಗೆ ಚೆಂಡು ನೇರವಾಗಿ ಬರುವ ಕಾರಣ ದೊಡ್ಡ ಮೊತ್ತದ ರನ್‌ ನಿರೀಕ್ಷಿಸಬಹುದು. ಬೌಲರ್‌ಗಳು ಇಲ್ಲಿ ಕಠಿಣ ಸವಾಲನ್ನು ಎದುರಿಸಲಿದ್ದಾರೆ. ಭಾರತ- ಇಂಗ್ಲೆಂಡ್ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. 2007, 2009 ಮತ್ತು 2012ರಲ್ಲಿ ಪರಸ್ಪರ ವಿರುದ್ಧ ಆಡಿವೆ. ಈ ವರೆಗಿನ ವಿಶ್ವಕಪ್‌ನ ಮೂರು ಪಂದ್ಯಗಳಲ್ಲಿ ಭಾರತ ಎರಡು ಬಾರಿ ಜಯ ಸಾಧಿಸಿದೆ ಮತ್ತು ಇಂಗ್ಲೆಂಡ್ ಒಂದು ಬಾರಿ ಗೆಲುವು ಕಂಡಿದೆ.
ಇಂದಿನ ಪಂದ್ಯ ಮಧ್ಯಾಹ್ನ 1:30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ 1 ಗಂಟೆಗೆ ನಡೆಯಲಿದೆ.

LEAVE A REPLY

Please enter your comment!
Please enter your name here

Most Popular

error: Content is protected !!