Thursday, December 1, 2022
spot_img
Homeಸುದ್ದಿಹಿಂದೂ ಹೇಳಿಕೆಯಿಂದ ಜಾರಕಿಹೊಳಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಕುತ್ತು?

ಹಿಂದೂ ಹೇಳಿಕೆಯಿಂದ ಜಾರಕಿಹೊಳಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಕುತ್ತು?

ರಾಜೀನಾಮೆ ಪಡೆದು ವಿವಾದ ಮುಗಿಸಲು ಕಾಂಗ್ರೆಸ್‌ ನಾಯಕರ ಚಿಂತನೆ

ಬೆಂಗಳೂರು: ಹಿಂದೂ ಅಶ್ಲೀಲ ಪದ ಎಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿರುವ ಬೆಳಗಾವಿ ಭಾಗದ ಪ್ರಭಾವಿ ನಾಯಕ ಸತೀಶ್‌ ಜಾರಕಿಹೊಳಿ ಈಗ ಕಾಂಗ್ರೆಸ್‌ ಪಾಲಿಗೆ ಬಿಸಿ ತುಪ್ಪವಾಗಿದ್ದಾರೆ. ಈ ಹೇಳಿಕೆ ಸತೀಶ್‌ ಜಾರಕಿಹೊಳಿ ಅವರ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೂ ಕುತ್ತಿ ತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸತೀಶ್ ಜಾರಕಿಹೊಳಿ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲೇ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದ್ದು, ಅವರ ತಲೆ ದಂಡವಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಚುನಾವಣೆಯ ಹೊಸ್ತಿಲಲ್ಲಿರುವಾಗ ಸತೀಶ್‌ ಜಾರಕಿಹೊಳಿ ಈ ರೀತಿ ಹೇಳಿಕೆ ನೀಡಿರುವುದು ಮಾತ್ರವಲ್ಲದೆ ಅದನ್ನು ಮತ್ತೆ ಸಮರ್ಥಿಸಿಕೊಂಡು ಕಾಂಗ್ರೆಸ್‌ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂ ನಮ್ಮ ಪದವೇ ಅಲ್ಲ, ಇದು ಪರ್ಷಿಯನ್‌ನಿಂದ ಬಂದಿರುವ ಪದ, ಹಿಂದೂ ಪದದ ಅರ್ಥ ಅಶ್ಲೀಲವಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಮಾತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತಮ್ಮ ಮಾತಿಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಸತೀಶ್ ಜಾರಕಿಹೊಳಿ ಇದು ನನ್ನ ವೈಯಕ್ತಿಕ ಹೇಳಿಕೆಯಲ್ಲ, ನನ್ನ ಮಾತನ್ನು ತಿರುಚಲಾಗಿದೆ. ದಾಖಲೆಗಳನ್ನು ಉಲ್ಲೇಖಿಸಿ ನಾನು ಈ ರೀತಿ ಮಾತನಾಡಿದ್ದೆ ಎಂದು ಸ್ಪಷ್ಟನೆ ನೀಡಿದ್ದರಾದರೂ ಅವರ ಮಾತಿಗೆ ಅವರ ಪಕ್ಷದಲ್ಲೇ ಆಕ್ಷೇಪ, ಅಸಮಾಧಾನಗಳು ವ್ಯಕ್ತವಾಗಿವೆ.
ಕಾಂಗ್ರೆಸ್ ಮೇಲೆ ಮುಗಿಬೀಳುತ್ತಿರುವ ಬಿಜೆಪಿ
ಸತೀಶ್ ಜಾರಕಿಹೊಳಿ ಅವರ ಮಾತನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್ ಸೇರಿದಂತೆ ಬಿಜೆಪಿಯ ಹಲವು ಸಚಿವರು, ಶಾಸಕರು ಸತೀಶ್ ಜಾರಕಿಹೊಳಿ ವಿರುದ್ಧ ಮುಗಿಬಿದ್ದಿದ್ದಾರೆ. ಇದು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕಂಟಕವಾಗಬಹುದು ಎಂಬ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಅವರಿಂದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪಡೆದು ವಿವಾದಕ್ಕೆ ಅಂತ್ಯ ಹಾಡಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬೆನ್ನಲ್ಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಜತೆ ದೂರವಾಣಿಯಲ್ಲಿ ಮಾತನಾಡಿ ಸತೀಶ್ ಜಾರಕಿಹೊಳಿ ಅವರ ರಾಜೀನಾಮೆ ಪಡೆಯುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರು ಹಿಂದೂ ಧರ್ಮದ ಈ ಹೇಳಿಕೆ ಕುರಿತು ಅವರಿಂದ ಸ್ಪಷ್ಟೀಕರಣ ಪಡೆದುಕೊಳ್ಳುತ್ತೇನೆ ಎಂದು ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸತೀಶ್ ಹೇಳಿಕೆ ಅವರ ವೈಯಕ್ತಿಕ ವಿಚಾರ, ತಮ್ಮ ಮನೆಯಲ್ಲಿ ಅವರು ಈ ಕುರಿತು ಮಾತನಾಡಿದ್ದರೆ ಏನೂ ಆಗುವುದಿಲ್ಲ. ಆದರೆ ಸಾರ್ವಜನಿಕ ಬದುಕಿನಲ್ಲಿ ಈ ರೀತಿ ಹೇಳಿಕೆ ನೀಡುವುದು ಖಂಡನೀಯ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!