ಅಮಲು ಬರಿಸುವ ಔಷಧ ನೀಡಿ ಮಕ್ಕಳ ಮೇಲೆ ಅತ್ಯಾಚಾರ

ಮುರುಘಾಶ್ರೀ ವಿರುದ್ಧ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಆಘಾತಕಾರಿ ಸತ್ಯ ಬಯಲು

ಚಿತ್ರದುರ್ಗ: ಮಠದ ಹಾಸ್ಟೆಲ್‌ನಲ್ಲಿರುವ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಜೈಲು ಪಾಲಾಗಿರುವ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ಮರುಘಾಶ್ರೀ ವಿರುದ್ಧ ಪೊಲೀಸರು ಸಲ್ಲಿಸಿರುವ ಎರಡನೇ ಚಾರ್ಜ್‌ಶೀಟ್‌ನಲ್ಲಿ ಮಠದಲ್ಲಿ ನಡೆಯುತ್ತಿದ್ದ ಕೆಲವು ಆಘಾತಕಾರಿ ವ್ಯವಹಾರಗಳ ಮಾಹಿತಿಯಿದೆ. 2ನೇ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 694 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಮಠದಲ್ಲಿ ನಡೆಯುತ್ತಿದೆ ಎನ್ನಲಾದ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.
ಪ್ರಕರಣದ ತನಿಖೆ ನಡೆಸಿರುವ ಡಿವೈಎಸ್ಪಿ ಅನಿಲ್ ನೇತೃತ್ವದ ತಂಡ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಮುರುಘಾಶ್ರೀ, ಲೇಡಿ ವಾರ್ಡನ್ ರಶ್ಮಿ, ಕಾರ್ಯದರ್ಶಿ ಪರಮಶಿವಯ್ಯ ಹಾಗೂ ಮಠದ ಉತ್ತರಾಧಿಕಾರಿ ವಿರುದ್ಧ ದೋಷಾರೋಪ ಮಾಡಲಾಗಿದೆ.
ಮುರುಘಾಶ್ರೀಗಳು ಲೇಡಿ ವಾರ್ಡನ್ ಮೂಲಕ ಮಕ್ಕಳನ್ನು ಕರೆಸಿ, ನಿರಂತರ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಅಮಲು ಬರುವ ಔಷಧಿ ಬೆರೆಸಿದ ಸೇಬು, ಚಾಕೊಲೇಟ್ ನೀಡಿ ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿದ್ದಾರೆ. ಕಚೇರಿ, ಬೆಡ್ ರೂಂ, ಬಾತ್ ರೂಂಗೆ ಕರೆದೊಯ್ದು ಬಲಾತ್ಕಾರ ಮಾಡಿದ್ದಾರೆ. ವಿರೋಧಿಸಿದವರಿಗೆ ಜೀವ ಬೆದರಿಕೆ ಹಾಕುತ್ತಿದ್ದರು. ಇದೇ ರೀತಿ ಹತ್ತಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಇದೆ ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ.
ಶ್ರೀಗಳ ಆಣತಿಯಂತೆ ಮಠದ ವಾರ್ಡನ್ ಶ್ರೀಗಳ ಕೊಠಡಿಗೆ ವಿದ್ಯಾರ್ಥಿನಿಯರನ್ನು ಕಳುಹಿಸಿಕೊಡುತ್ತಿದ್ದಳು. ಅಲ್ಲದೆ ಈ ವಿಚಾರ ಹೊರಗೆ ಬಾಯಿ ಬಿಡದಂತೆ ವಿದ್ಯಾರ್ಥಿನಿಯರಿಗೆ ಹೆದರಿಸುತ್ತಿದ್ದಳು ಎನ್ನಲಾಗಿದೆ.
ಕೆಲ ವರ್ಷದ ಹಿಂದೆ ಓರ್ವ ಬಾಲಕಿಯಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಈ ಬಗ್ಗೆ ಸಂತ್ರಸ್ತ ಬಾಲಕಿಯರಿಂದ ಹೇಳಿಕೆ ಪಡೆದು, ಆಂಧ್ರ ಪ್ರದೇಶಕ್ಕೆ ತೆರಳಿದ್ದ ಪೊಲೀಸ್ ತಂಡ ಹಲವು ಮಾಹಿತಿಗಳನ್ನ ಕಲೆ ಹಾಕಿದೆ. ಮಠದ ಹಾಸ್ಟೆಲ್‌ನಲ್ಲಿದ್ದ ಮತ್ತಷ್ಟು ಮಕ್ಕಳ ವಿಚಾರಣೆ ನಡೆಸಲಾಗುತ್ತಿದ್ದು, ಶ್ರೀಗಳ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.





























































































































































































































error: Content is protected !!
Scroll to Top