Saturday, December 10, 2022
spot_img
Homeಸುದ್ದಿಸ್ವಚ್ಚತೆ , ಪರಿಸರ ಪ್ರಜ್ಞೆ, ಶಿಸ್ತುಬದ್ಧ ಜೀವನ : ಯೋಧ ಭಾಸ್ಕರ ಪೂಜಾರಿ ಕರೆ

ಸ್ವಚ್ಚತೆ , ಪರಿಸರ ಪ್ರಜ್ಞೆ, ಶಿಸ್ತುಬದ್ಧ ಜೀವನ : ಯೋಧ ಭಾಸ್ಕರ ಪೂಜಾರಿ ಕರೆ

ಕಸಾಪ ಸಂಪದ ತಿಂಗಳ ಸಡಗರ – ಯೋಧರೆಡೆಗೆ ನಮ್ಮ ನಡಿಗೆ

ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ ಮತ್ತು ಹೆಬ್ರಿ ತಾಲೂಕು ಘಟಕ, ಗೀತಾನಂದ ಫೌಂಡೇಶನ್ ಮಣೂರು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ರಾಜ್ಯೋತ್ಸವದ ಅಂಗವಾಗಿ ತಿಂಗಳ ಸಡಗರ ಕಾರ್ಯಕ್ರಮ ಯೋಧರೆಡೆಗೆ ನಮ್ಮ ನಡಿಗೆ ನಾಡ್ಪಾಲು ಗ್ರಾಮದ ಹಳೆಸೋಮೇಶ್ವರದಲ್ಲಿ ಜರುಗಿತು. ನಿವೃತ್ತ ಯೋಧ ಭಾಸ್ಕರ ಪೂಜಾರಿಯವರನ್ನು ಅವರ ಮನೆಯಲ್ಲಿ ಅಭಿನಂದಿಸಲಾಯಿತು.
ಕಸಾಪ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮುದ್ದೂರು ಅಧ್ಯಕ್ಷತೆ ವಹಿಸಿದ್ದರು. ನಾಡ್ಪಾಲು ಗ್ರಾಮ ಪಂಚಾಯತ್ ಸದಸ್ಯ ರಾಘವೇಂದ್ರ ಹೆಗ್ಡೆ, ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ ಕೆ. ಶಿವಪುರ, ಡಾ. ಪ್ರವೀಣ ಕುಮಾರ್ ಎಸ್., ಸದಸ್ಯರಾದ ಉದಯ ಆಚಾರ್ ತಣ್ಣೀರು, ವೆಂಕಟೇಶ ಶೆಟ್ಟಿ, ಕಸಾಪ ಸದಸ್ಯರು, ಊರ ಪ್ರಮುಖರು ಉಪಸ್ಥಿತರಿದ್ದರು.
ಸೇನೆಯ ತನ್ನ ಅನುಭವಗಳನ್ನು ಹಂಚಿಕೊಂಡ ಭಾಸ್ಕರ ಪೂಜಾರಿಯವರು ಪರಿಷತ್ತು ನಮ್ಮ ಮನೆಗೆ ಬಂದು ಅಭಿನಂದಿಸಿರುವುದು ತುಂಬ ಖುಷಿಯಾಗಿದೆ. ಇಂತಹ ಕಾರ್ಯಕ್ರಮ ಬಹಳ ಅಪರೂಪ ಎಂದು ಕೃತಜ್ಞತೆ ತಿಳಿಸಿದರು. ದೇಶ ಸೇವೆಯನ್ನು ಮಾಡುವುದು ನಮ್ಮ ಕರ್ತವ್ಯವಾಗಿದ್ದು ಅದನ್ನು ಗುರುತಿಸಿ ಗೌರವಿಸುವ ಮೂಲಕ ಕಸಾಪ ಹಿರಿಮೆಯನ್ನು ಮೆರೆದಿದೆ. ಸ್ವಚ್ಚತೆ , ಪರಿಸರ ಪ್ರಜ್ಞೆ ಮತ್ತು ಶಿಸ್ತುಬದ್ಧ ಜೀವನಕ್ಕೆ ಎಲ್ಲರೂ ಗಮನ ನೀಡಬೇಕು ಎಂದರು
ನಾಡ್ಪಾಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಮಣ್ಣ ಪೂಜಾರಿ, ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ನಮ್ಮೂರಿನ ಯೋಧರನ್ನು ಅಭಿನಂದಿಸಿರುವುದು ಬಹಳ ಉತ್ತಮ ಕಾರ್ಯಕ್ರಮ. ಇದರಿಂದ ಇತರರಿಗೂ ಪ್ರೇರಣೆ ಸಿಗುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ನವಂಬರ್ ತಿಂಗಳು ಪೂರ್ತಿ ಇಂತಹ ಕಾರ್ಯಕ್ರಮಗಳನ್ನು ಎಲ್ಲ ತಾಲೂಕುಗಳಲ್ಲಿ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಯೋಧ ಭಾಸ್ಕರ ಪೂಜಾರಿಯವರು ನಿವೃತ್ತರಾದ ಮೇಲೂ ಸಮಾಜಕ್ಕೆ ಉಪಯೋಗವಾಗುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ವಿಷಯ ಎಂದರು.
ಹಸಿರಿನ ನಡುವೆ ಹಳ್ಳಿಮನೆಯಲ್ಲಿ ನಡೆದ ಕಾರ್ಯಕ್ರಮ ಸೊಗಸಾಗಿ ಮತ್ತು ಅರ್ಥಪೂರ್ಣವಾಗಿ ಮೂಡಿಬಂತು. ಪ್ರೀತೇಶ್ ಕುಮಾರ್ ಶೆಟ್ಟಿ ಸ್ವಾಗತಿಸಿದರು ಪುಷ್ಪಾವತಿ ಶೆಟ್ಟಿ ಪ್ರಾರ್ಥಿಸಿದರು, ಮಹೇಶ್ ಹೈಕಾಡಿ ನಿರೂಪಿಸಿದರು ಉದಯ ಆಚಾರ್ ವಂದಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!