Thursday, December 1, 2022
spot_img
Homeಸುದ್ದಿ14 ಗ್ರಾ.ಪಂ. ವ್ಯಾಪ್ತಿಯ 100 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ

14 ಗ್ರಾ.ಪಂ. ವ್ಯಾಪ್ತಿಯ 100 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ

ಸರಕಾರಿ ಜಾಗದಲ್ಲಿ ಮನೆಮಾಡಿಕೊಂಡಿರುವ ಎಲ್ಲರಿಗೂ ಹಕ್ಕುಪತ್ರ – ಸುನೀಲ್‌ ಕುಮಾರ್‌

ಕಾರ್ಕಳ : ಸರಕಾರಿ ಜಾಗದಲ್ಲಿ ಯಾರೂ ಮನೆ ಮಾಡಿಕೊಂಡಿದ್ದರೂ ಅಂತಹ ಅರ್ಹ ಕುಟುಂಬಕ್ಕೆ ಹಕ್ಕು ಪತ್ರವನ್ನು ಕೊಟ್ಟೆ ಕೊಡುತ್ತೇವೆ ಎಂದು ಸಚಿವ ಸುನೀಲ್‌ ಕುಮಾರ್‌ ಹೇಳಿದರು. ಅವರು ನ. 8 ರಂದು ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ 2015ರಿಂದ ಸರಕಾರಿ ಜಾಗದಲ್ಲಿ ಮನೆ ಮಾಡಿಕೊಂಡಿರುವ 14 ಗ್ರಾ.ಪಂ. ವ್ಯಾಪ್ತಿಯ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.
ತಮ್ಮ ಜೀವನದ ಆಸರೆಗಾಗಿ ಮನೆ ಮಾಡಿಕೊಂಡಿರುವ ಕೂಲಿ ಕಾರ್ಮಿಕ ವರ್ಗ ಹಾಗೂ ಸಾಮಾನ್ಯ ಬಡ ಜನತೆಗೆ ಬಿಜೆಪಿ ಸರಕಾರ ಹಕ್ಕುಪತ್ರ ನೀಡಲು ಬದ್ಧವಾಗಿದೆ. ಹಕ್ಕುಪತ್ರ ದೊರೆತ ಒಂದು ವಾರದಲ್ಲಿ ಆರ್‌ಟಿಸಿ ಪಡೆಯಬಹುದಾಗಿದೆ. ಹೊಸಮನೆ ಕಟ್ಟುವವರು ಪಂಚಾಯತ್‌ಗೆ ಅರ್ಜಿ ಸಲ್ಲಿಸಿ ವಸತಿ ಯೋಜನೆಯಲ್ಲಿ ಅನುದಾನ ಪಡೆಯಬೇಕೆಂದು ಸುನೀಲ್‌ ಕುಮಾರ್‌ ಹೇಳಿದರು.

100 ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರ
ತಾಲೂಕು ವ್ಯಾಪ್ತಿಯ ಸರಕಾರಿ ಜಾಗದಲ್ಲಿ ಮನೆ ಮಾಡಿರುವಂತಹ ಕುಟುಂಬದ ಕುರಿತು ಕಂದಾಯ ಇಲಾಖೆಯಿಂದ ಪರಿಶೀಲನೆ ನಡೆಸಿ ಕಾನೂನಿನ ತೊಡಕುಗಳನ್ನು ನಿವಾರಣೆ ಮಾಡಿ 100 ಮಂದಿ ಫಲಾನುಭವಿಗಳಿಗೆ ಇಂದು ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಕಾರ್ಕಳ ತಹಶೀಲ್ದಾರ್‌, ಕಂದಾಯ ಇಲಾಖೆ ಅಧಿಕಾರಿ ಸಿಬ್ಬಂದಿ ವರ್ಗದವರು ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ. ಹಕ್ಕುಪತ್ರ ವಿತರಣೆ ಕಾರ್ಯ ಮುಂದುವರಿಯುತ್ತದೆ ಮತ್ತು ಮುಂದಿನ ದಿನಗಳಲ್ಲಿ ಆಯಾ ಗ್ರಾ. ಪಂ. ಗಳಿಗೆ ಬಂದು ಹಕ್ಕು ಪತ್ರ ವಿತರಿಸಲಾಗುವುದು ಎಂದು ಸುನೀಲ್‌ ಕುಮಾರ್‌ ತಿಳಿಸಿದರು.

ಭೂ ಮಾಲಕರು ನೀವೇ
ಹಕ್ಕು ಪತ್ರದಿಂದಾಗಿ ಇವತ್ತಿನಿಂದ ಅಧಿಕೃತವಾಗಿ ನಿಮ್ಮ ಜಾಗದ ಮಾಲಕರು ನೀವೇ ಆಗಿದ್ದೀರಿ. ಪ್ರತಿಯೊಬ್ಬರೂ ಸರಕಾರದಿಂದ ದೊರೆಯುವ ಸೌಲಭ್ಯ ಪಡೆಯಬೇಕೆಂಬುದೇ ನಮ್ಮ ಆಶಯವೆಂದು ಸುನೀಲ್‌ ಕುಮಾರ್‌ ಅಭಿಪ್ರಾಯಪಟ್ಟರು.

ತಲಾ 1 ಲಕ್ಷ ರೂ. ಪರಿಹಾರದ ಚೆಕ್‌ ಹಸ್ತಾಂತರ
ಕೋವಿಡ್‌ನಲ್ಲಿ ಮೃತಪಟ್ಟ ಎರಡು ಕುಟುಂಬಗಳಿಗೆ ಇದೇ ಸಂದರ್ಭ ತಲಾ 1 ಲಕ್ಷ ರೂ. ವಿನಂತೆ ಪರಿಹಾರದ ಚೆಕ್‌ ನೀಡಲಾಯಿತು. ಕಾರ್ಕಳದ ಶರೀಫ್‌, ಮರ್ಣೆಯ ಸುಚಿತ್ರ ಚೆಕ್‌ ಸ್ವೀಕರಿಸಿದರು.

ತಹಶೀಲ್ದಾರ್‌ ಪ್ರದೀಪ್‌ ಕುರುಡೇಕರ್‌, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್‌ ಎಂ.ಎನ್.‌, ಕುಕ್ಕುಂದೂರು ಗ್ರಾ. ಪಂ. ಅಧ್ಯಕ್ಷೆ ಶಶಿಮಣಿ ಸಂಪತ್‌, ಮಿಯ್ಯಾರು ಗ್ರಾ. ಪಂ. ಅಧ್ಯಕ್ಷ ಗಿರೀಶ್‌ ಅಮೀನ್‌, ರೆಂಜಾಳ ಗ್ರಾ. ಪಂ. ಅಧ್ಯಕ್ಷೆ ದೀಪಿಕಾ, ನಲ್ಲೂರು ಗ್ರಾ. ಪಂ. ಅಧ್ಯಕ್ಷೆ ಕವಿತಾ ಸಂತೋಷ್, ಹಿರ್ಗಾನ ಗ್ರಾ. ಪಂ. ಅಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ, ಶಿರ್ಲಾಲು ಗ್ರಾ. ಪಂ. ಅಧ್ಯಕ್ಷ ರಮಾನಂದ ಪೂಜಾರಿ, ನೀರೆ ಗ್ರಾ. ಪಂ. ಅಧ್ಯಕ್ಷೆ ಶಾಲಿನಿ ಮತ್ತು ಮಾಳ ಗ್ರಾ. ಪಂ. ಅಧ್ಯಕ್ಷೆ ರಕ್ಷಿತಾ ಶೆಟ್ಟಿ ಉಪಸ್ಥಿತರಿದ್ದರು. ಕಂದಾಯ ಇಲಾಖೆ ಪ್ರಥಮ ದರ್ಜೆ ಸಹಾಯಕ ಮಹಮ್ಮದ್ ರಿಯಾಜ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!