Saturday, December 10, 2022
spot_img
Homeಸುದ್ದಿಸತೀಶ್‌ ಜಾರಕಿಹೊಳಿ ಹೇಳಿಕೆಯಿಂದ ಕಾಂಗ್ರೆಸ್‌ಗೆ ಮುಜುಗರ

ಸತೀಶ್‌ ಜಾರಕಿಹೊಳಿ ಹೇಳಿಕೆಯಿಂದ ಕಾಂಗ್ರೆಸ್‌ಗೆ ಮುಜುಗರ

ಪಕ್ಷದಿಂದ ಕಿತ್ತು ಹಾಕಲು ಸುನೀಲ್‌ ಕುಮಾರ್‌ ಒತ್ತಾಯ

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹಿಂದು ಪದವೇ ಅಶ್ಲೀಲ, ಅದು ನಮ್ಮ ಧರ್ಮವಲ್ಲ, ಪರ್ಷಿಯಾದಿಂದ ಬಂದಿರುವುದು ಎಂದು ಹೇಳಿಕೆ ನೀಡಿ ಕಾಂಗ್ರೆಸ್‌ನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದಾರೆ. ಚುನಾವಣೆ ಸನ್ನಿಹಿತವಾಗುತ್ತಿರುವ ಸಂದರ್ಭದಲ್ಲಿ ಬಹುಸಂಖ್ಯಾತರಾಗಿರುವ ಹಿಂದುಗಳ ವಿರುದ್ಧ ನೀಡಿದ ಈ ಹೇಳಿಕೆ ಚುನಾವಣೆಯಲ್ಲಿ ಬೀರಬಹುದಾದ ಪರಿಣಾಮವನ್ನು ಎಣಿಸಿ ಬೆವರುತ್ತಿರುವ ಕಾಂಗ್ರೆಸ್‌ ನಾಯಕರು ಹೇಳಿಕೆ ಹಿಂಪಡೆದು ಬೇಷರತ್‌ ಕ್ಷಮೆ ಯಾಚಿಸಲು ಜಾರಕಿಹೊಳಿ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಬೆಳಗಾವಿಯಲ್ಲಿ ನಡೆದ ಬೌದ್ಧರ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸತೀಶ್‌ ಜಾರಕಿಹೊಳಿ ಹಿಂದು ಧರ್ಮವನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ಅವರ ಈ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಸುನೀಲ್‌ ಕುಮಾರ್‌ ವಿರೋಧ
ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‌ ಕುಮಾರ್‌ ಅವರು ಜಾರಕಿಹೊಳಿ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದು, ಇದು ಕಾಂಗ್ರೆಸಿನ ಹಿಂದು ವಿರೋಧಿ ನೀತಿಯ ಬಹಿರಂಗ ಪ್ರದರ್ಶನ ಎಂದು ಹೇಳಿದ್ದಾರೆ.
ಜಗತ್ತಿನಾದ್ಯಂತ ಹಿಂದು ಧರ್ಮ ವಿಶೇಷವಾದ ಮಾನ್ಯತೆಯನ್ನು ಹೊಂದಿದೆ. ಇಂಥ ಧರ್ಮ ಅಶ್ಲೀಲ ಎನ್ನುವ ಮೂಲಕ ಜಾರಕಿಹೊಳಿ ಜಗತ್ತಿನಲ್ಲಿರುವ ಸಮಸ್ತ ಹಿಂದುಗಳನ್ನು ಅಪಮಾನಿಸಿದ್ದಾರೆ. ಇದಕ್ಕೆ ಅವರು ಕ್ಷಮೆ ಯಾಚಿಸಿದರೆ ಸಾಲದು, ಕಾಂಗ್ರೆಸ್‌ ಅವರನ್ನು ಪಕ್ಷದಿಂದ ಕಿತ್ತೆಸೆಯಬೇಕು ಎಂದು ಹೇಳಿದ್ದಾರೆ.
ಡಿಕೆಶಿ ಅಸಮಾಧಾನ
ಹಿಂದೂ ಧರ್ಮದ ಬಗ್ಗೆ ಮಾತಾಡಿದ್ದು ತಪ್ಪು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ ಹೇಳಿದ್ದಾರೆ. ಸತೀಶ್ ಜಾರಕಿಹೊಳಿ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಕೆಪಿಸಿಸಿ ಅಧ್ಯಕ್ಷನಾಗಿ ಸೂಚಿಸುತ್ತೇನೆ. ಸತೀಶ್ ಜಾರಕಿಹೊಳಿ ಯಾವ ಅರ್ಥದಲ್ಲಿ ಹೇಳಿದ್ದಾರೆಂದು ಗೊತ್ತಿಲ್ಲ. ನಮ್ಮ ದೇಶದಲ್ಲಿ ಹಿಂದೂ ಮೂಲ ಧರ್ಮವಾಗಿದೆ. ಹಿಂದೂ ಧರ್ಮದ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.
ಅಕ್ಷಮ್ಯ ಅಪರಾಧ
ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿಕೆ ಅಕ್ಷಮ್ಯ ಅಪರಾಧ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕನ ಹೇಳಿಕೆಯನ್ನು ನಾನು ಖಂಡಿಸುವೆ. ಹಿಂದೂಗಳನ್ನು ಅವಹೇಳನ ಮಾಡುತ್ತಿರೋದು ಸರಿಯಲ್ಲ. ಸತೀಶ್‌ ಒಬ್ಬ ನಾಸ್ತಿಕವಾದಿ, ಹಿಂದೂ ವಿರೋಧಿ ಆಗಿದ್ದಾರೆ. ಸ್ಮಶಾನದಲ್ಲಿ ಪೂಜೆ, ಮದುವೆ ಮಾಡುತ್ತಾರೆ ಎಂದು ಮುತಾಲಿಕ್ ಹೇಳಿದ್ದಾರೆ. ಸತೀಶ್ ಅವರಿಗೆ ಹಿಂದೂಗಳ ಬಗ್ಗೆ ಮಾತನಾಡುವ ಹಕ್ಕಿಲ್ಲ, ಕ್ಷಮೆ ಕೇಳಲಿ. ಹಿಂದೂ ಶಬ್ದ ಅತ್ಯಂತ ಪ್ರಾಚೀನ ಮತ್ತು ಪುರಾತನವಾದುದು. ಕ್ರಿಸ್ತ ಪೂರ್ವದಿಂದಲೂ ಹಿಂದೂ ಶಬ್ದ ಬಳಕೆಯಲ್ಲಿದೆ. ಹಿಂದೂ ಶಬ್ದಕ್ಕೆ ಅಪಮಾನ ಮಾಡುವುದು ಸರಿಯಲ್ಲ. ಕಾಂಗ್ರೆಸ್‌ನವರಿಗೆ ಇನ್ನೂ ಬುದ್ಧಿ ಬಂದಿಲ್ಲ. ಕುವೆಂಪುರವರ ನಾಡಗೀತೆಯಲ್ಲೇ ಹಿಂದೂ ಪದ ಇದೆ. ಹಿಂದೂ ಧರ್ಮ ಜೀವನ ಪದ್ಧತಿ ಎಂದು ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ. ಹಿಂದೂ ಶಬ್ದ ಜಾತಿ ಸೂಚಕ ಅಲ್ಲ, ಮತ ಸೂಚಕ ಅಲ್ಲ ಎಂದಿದ್ದಾರೆ ಮುತಾಲಿಕ್.
ಕಾಂಗ್ರೆಸ್‌ ಹೈಕಮಾಂಡ್‌ ಖಂಡನೆ
ಜಾರಕಿಹೊಳಿ ಹೇಳಿಕೆಯನ್ನು ಕಾಂಗ್ರೆಸ್‌ ಹೈಕಮಾಂಡ್‌ ಕೂಡ ಖಂಡಿಸಿದ್ದು, ಹಿಂದೂ ಪದದ ಕುರಿತ ಹೇಳಿಕೆ ದುರದೃಷ್ಟಕರ ಎಂದು ಹೇಳಿದೆ.
ಹಿಂದೂ ಪದದ ಅರ್ಥವೇ ಅಶ್ಲೀಲ ಎಂದ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತಿರಸ್ಕರಿಸಿದ್ದಾರೆ.
ಹಿಂದೂ ಧರ್ಮ ಒಂದು ಜೀವನ ವಿಧಾನವಾಗಿದ್ದು, ಪ್ರತಿಯೊಂದು ಧರ್ಮ ಮತ್ತು ನಂಬಿಕೆಯನ್ನು ಗೌರವಿಸಿಕೊಂಡು ಕಾಂಗ್ರೆಸ್ ರಾಷ್ಟ್ರವನ್ನು ನಿರ್ಮಿಸಿದೆ ಎಂದು ಹೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ಸತೀಶ್ ಜಾರಕಿಹೊಳಿ ಅವರ ಹೇಳಿಕೆಯು ಅತ್ಯಂತ ದುರದೃಷ್ಟಕರ ಮತ್ತು ತಿರಸ್ಕಾರ ಅರ್ಹ. ಜಾರಕಿಹೊಳಿ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.
ಜಾರಕಿಹೊಳಿ ಸಮರ್ಥನೆ
ಇಷ್ಟೆಲ್ಲ ವಿವಾದ ಆಗಿದ್ದರೂ ಸತೀಶ್‌ ಜಾರಕಿಹೊಳಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನನ್ನ ಹೇಳಿಕೆಯನ್ನು ಹತ್ತು ಬಾರಿ ಕೇಳಿಸಿಕೊಳ್ಳಿ, ಏನಾದರೂ ತಪ್ಪು ಕಂಡುಬಂದರೆ ಟೀಕಿಸಿ. ಗ್ರಂಥಗಳಲ್ಲಿ ಇರುವ ವಿಚಾರವನ್ನೇ ನಾನು ಹೇಳಿದ್ದೇನೆ. ನನ್ನ ಹೇಳಿಕೆ ಭಯೋತ್ಪಾದನೆ ಸುದ್ದಿಯಲ್ಲ, ವಿಚಾರ ತಿಳಿಯದೆ ಚರ್ಚಿಸಬೇಡಿ ಎಂದು ಜಾರಕಿಹೊಳಿ ತನ್ನ ಹೇಳಿಕೆಗೆ ಅಂಟಿಕೊಂಡಿದ್ದಾರೆ.
ಭಾರತಕ್ಕೂ, ಪರ್ಷಿಯಕ್ಕೂ ಏನು ಸಂಬಂಧ? ಹಿಂದೂ ಭಾರತೀಯ ಪದವೇ ಅಲ್ಲ, ಅದು ಪರ್ಷಿಯನ್ ಪದ. ಹಿಂದೂ ನಮ್ಮದು ಹೇಗೆ ಆಯಿತು ಅನ್ನೋದು ಚರ್ಚೆ ಆಗಬೇಕಿದೆ. ಹಿಂದೂ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಅದು ನಿಮಗೆ ತಿಳಿದರೆ ನಿಮಗೆ ನಾಚಿಕೆ ಆಗುತ್ತೆ. ಎಲ್ಲಿಂದಲೋ ಬಂದಿರುವ ಧರ್ಮವನ್ನು ತಂದು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ ಎಂದು ಹೇಳಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!