ಕಗ್ಗದ ಸಂದೇಶ : ಕೆಣಕಿ ಕೆಡುವುದು ಬೇಡ…


ಹುಲಿಯ ಕೆಣಕುವುದು ಹುಲಿ; ಕಪಿಯನಣಕಿಪುದು ಕಪಿ|
ಹುಲಿಕಪಿಗಳವಿತಿರದ ನರಜಂತುವೆಲ್ಲಿ?||
ಮಲಗಿರುವ ಮೃಗವನಂತಿರಲು ಬಿಡುವುದೆ ಲೇಸು|
ಕುಲುಕದಿರು ಬಾಲವನು- ಮಂಕುತಿಮ್ಮ||

ಹುಲಿಯನ್ನು ಇನ್ನೊಂದು ಹುಲಿ ಕೆಣಕುವುದು. ಕಪಿಯು ಇನ್ನೊಂದು ಕಪಿಯನ್ನು ಅಣಕಿಸುವುದು. ಮನುಷ್ಯನ ವ್ಯಕ್ತಿತ್ವದಲ್ಲಿಯೂ ಈ ಹುಲಿ ಕಪಿಗಳ ಗುಣ ಅವಿತಿದೆ. ಮಲಗಿಕೊಂಡಿರುವ ಈ ಪ್ರಾಣಿಯ‌ ಬಾಲವನ್ನು ಕುಲುಕಿ ಎಬ್ಬಿಸುವುದನ್ನು ಬಿಟ್ಟು ಅದನ್ನು ಹಾಗೆ ಬಿಡುವುದೇ ಒಳ್ಳೆಯದು.ಅಂದರೆ ನಮ್ಮೊಳಗಿರುವ ಹುಲಿ ಕಪಿಗಳ ಗುಣ ಜಾಗೃತಗೊಳ್ಳದಂತೆ ಎಚ್ಚರ ವಹಿಸುವುದು ಜಾಣತನ ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ಇನ್ನೊಬ್ಬರನ್ನು ಕೆಣಕುವುದು ಮತ್ತು ಅಣಕವಾಡುವುದು ಎರಡೂ ಒಳ್ಳೆಯತನದ ಲಕ್ಷಣಗಳಲ್ಲ. ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲ ಇವೆ ಈ ನಮ್ಮೊಳಗೆ. ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಗಗೆ ಎಂದು ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರು ತಮ್ಮ ‘ಅನ್ವೇಷಣೆ’ ಕವಿತೆಯಲ್ಲಿ ಹೇಳಿದ್ದಾರೆ. ನಾವು ನಮ್ಮ ಮನಸ್ಸನ್ನು ಕಲಕಿ ಕೆಡುಕಿನ ಕೆಸರನ್ನು ಮೇಲೆ ತರಬಾರದು. ಪ್ರಾಣಿಗಳಲ್ಲಿ ಅತ್ಯಂತ ವಿಶೇಷವಾದ ವೈಶಿಷ್ಟ್ಯಪೂರ್ಣವಾದ ಪ್ರಾಣಿಯೆಂದರೆ ಮನುಷ್ಯ. ಯಾಕೆಂದರೆ ಸರ್ವ ಪ್ರಾಣಿಗಳಲ್ಲಿರುವ ಸರ್ವ ಗುಣ ಸಂಪನ್ನ ಎಂದರೆ ಮಾನವ. ಅದಕ್ಕೆ ಡಿವಿಜಿಯವರೆ ತಮ್ಮ ಇನ್ನೊಂದು ಕಗ್ಗದಲ್ಲಿ

ರಾವಣನ ದಶಶಿರವದೇಂ?|
ನರನು ಶತಶಿರನು||
ಸಾವಿರಾಸ್ಯಗಳನೊಂದರೊಳಣಗಿಸಿಹನು|
ಹಾವಾಗಿ ಹುಲಿಯಾಗಿ ಕಪ್ಪೆಹುಲ್ಲೆಯುಮಾಗಿ| ಮಂಕುತಿಮ್ಮ
ಎಂದು ಹೇಳಿದ್ದಾರೆ.
ಕೋಪ ಅಡರದ ತೆರದಿ ಪಾಪ ಮುತ್ತದ ಹಾಗೆ||
ಪರರ ನಿಂದಿಸಿದಂತೆ ಇರಲಿ ಈ ಮನಸು||
ಆಗ ಮತ್ಸರವಿಲ್ಲ, ಕಾಮಲೋಭಗಳಿಲ್ಲ|
ನಿರ್ಮಲತೆ ನಿತ್ಯಸುಖ-ಮುದ್ದುರಾಮ||

ಎಂಬ ಕೆ. ಶಿವಪ್ಪನವರ ಮಾತಿನಂತೆ ಬದುಕಿನ ನೆಮ್ಮದಿಗೆ ಮನಸ್ಸಿನ ನಿರಾಳತೆ ಬಹಳ ಮುಖ್ಯವಾಗುತ್ತದೆ. ನಮ್ಮ ಮನಸ್ಸಿಗೆ ದುರ್ಗುಣಗಳು ಮುತ್ತದಂತೆ ಎಚ್ಚರಿಕೆ ವಹಿಸಬೇಕು. ಕೆಣಕುವುದು, ಕೆರಳಿಸುವುದು ಮತ್ತು ಅಣಕಿಸುವುದನ್ನು ಬಿಟ್ಟು ಇತರ ಮನಸ್ಸನ್ನು ಅರಳಿಸುವಂತಹ ನಡವಳಿಕೆ ನಮ್ಮದಾಗಬೇಕು. ಮಾನವನಲ್ಲಿ ಮೃಗೀಯ ಗುಣಗಳು ಇರುವುದರಲ್ಲೇನು ವಿಶೇಷವಿಲ್ಲ. ಅವುಗಳು ಪ್ರಕಟವಾಗದಂತೆ ಎಚ್ಚರವಹಿಸುತ್ತಾ ನಮ್ಮ ವರ್ತನೆಯ ಪರಿಶುದ್ಧತೆಯನ್ನು ಕಾಯ್ದುಕೊಂಡಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕಸಾಪ ಕಾರ್ಕಳ ಘಟಕ.

Latest Articles

error: Content is protected !!