ಕೇಂದ್ರ ಇಂಟೆಲಿಜೆನ್ಸ್ ಬ್ಯೂರೋ ನಿವೃತ ಅಧಿಕಾರಿ ಸಾವು – ಹಿಟ್ ಅಂಡ್ ರನ್ ರೂಪದಲ್ಲಿ ಕೊಲೆ ಶಂಕೆ

ಮೈಸೂರು: ಕೇಂದ್ರ ಇಂಟೆಲಿಜೆನ್ಸ್ ಬ್ಯೂರೋ ನಿವೃತ್ತ ಅಧಿಕಾರಿ ಆರ್.ಎಸ್. ಕುಲಕರ್ಣಿ (83) ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮೈಸೂರಿನ ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿ ನಡೆದಿದೆ. ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಕುಲಕರ್ಣಿ ಅವರಿಗೆ ಕಾರು ಡಿಕ್ಕಿ ಹೊಡೆದಿದ್ದು, ಕಾರಿನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಅಪಘಾತ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ತೀವ್ರವಾಗಿ ಗಾಯಗೊಂಡಿದ್ದ ಕುಲಕರ್ಣಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಜರುಗಿದೆ. ಮೇಲ್ನೋಟಕ್ಕೆ ಇದೊಂದು ಹಿಟ್ ಆ್ಯಂಡ್ ರನ್ ಪ್ರಕರಣವಾಗಿದ್ದು, ನಂಬರ್ ಪ್ಲೇಟ್ ಇಲ್ಲದ ಕಾರು ಇವರಿಗೆ ಡಿಕ್ಕಿಯಾಗಿದೆ. ಕುಲಕರ್ಣಿಯವರು ಮಾನಸ ಗಂಗೋತ್ರಿ ಕ್ಯಾಂಪಸ್‌ನಲ್ಲಿ ಪ್ರತಿನಿತ್ಯವೂ ವಾಕಿಂಗ್ ಮಾಡುತ್ತಿದ್ದರು. ಕಳೆದ ಶುಕ್ರವಾರ ಸಂಜೆ 5.30ರ ವೇಳೆಯಲ್ಲಿ ವಾಕಿಂಗ್ ಮಾಡುವಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಘಾತ ಮಾಡಿ ಪರಾರಿಯಾಗಿದ್ದಾರೆ. ಸಿಸಿಟಿವಿಯಲ್ಲಿ ದೊರೆತ ದೃಶ್ಯದ ಪ್ರಕಾರ ಕೊಲೆ ಮಾಡುವ ಉದ್ದೇಶದಿಂದಲೇ ರಸ್ತೆ ಬದಿಯಲ್ಲಿ ನಡೆದು ಸಾಗುತ್ತಿದ್ದ ಕುಲಕರ್ಣಿಗೆ ಡಿಕ್ಕಿ ಹೊಡೆದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಜಯಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಪೂರ್ವಾಪರ ಹಾವೇರಿಯ ಸವಣೂರು ಮೂಲದ ಆರ್.ಎಸ್.ಕುಲಕರ್ಣಿ ಕೇಂದ್ರದ ಇಂಟೆಲಿಜೆನ್ಸ್ ಬ್ಯೂರೋದ ನಿವೃತ್ತ ಅಧಿಕಾರಿಯಾಗಿದ್ದಾರೆ. 1963ರಿಂದ 3 ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಕುಲಕರ್ಣಿ ರಾಜತಾಂತ್ರಿಕ, ಕಾರ್ಪೊರೇಟ್ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸಿದ್ದರು ಮತ್ತು ವಾಯುಯಾನ ಸಂಶೋಧನಾ ಕೇಂದ್ರದಲ್ಲೂ ಛಾಪು ಮೂಡಿಸಿದ್ದರು. ಕಳೆದ 23 ವರ್ಷಗಳ ಹಿಂದೆ ನಿವೃತ್ತಿ ಪಡೆದಿದ್ದರು.

error: Content is protected !!
Scroll to Top