ನ. 10 : ಕಾರ್ಕಳದ ಪ್ರಥಮ ವೈದ್ಯೆ ಡಾ. ಕೆ. ವಿಮಲಾ ಬಾಯಿ ಜನ್ಮ ಶತಮಾನೋತ್ಸವ ಪುಣ್ಯಸ್ಮರಣೆ

ಬೋರ್ಡ್‌ ಹೈಸ್ಕೂಲಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ಕಾರ್ಕಳ : ಕಾರ್ಕಳದ ಪ್ರಥಮ ಲೇಡಿ ಡಾಕ್ಟರ್‌ ದಿ. ಕೆ. ವಿಮಲಾ ಬಾಯಿ ಅವರ ಜನ್ಮ ಶತಮಾನೋತ್ಸವದ ಪುಣ್ಯಸ್ಮರಣೆ ಕಾರ್ಯಕ್ರಮ ಕಾರ್ಕಳದ ಹೊಟೇಲ್ ಕಟೀಲ್ ಇಂಟರ್‌ನ್ಯಾಷನಲ್‌ನಲ್ಲಿ ನ. 10ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌ ಅಧ್ಯಕ್ಷತೆ ವಹಿಸಲಿದ್ದು, ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಬೋರ್ಡ್‌ ಹೈಸ್ಕೂಲ್‌ನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್‌ ಅಡ್ಯಂತಾಯ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ, ನಿಟ್ಟೆ ಡೀಮ್ಡ್‌ ಯೂನಿವರ್ಸಿಟಿ ಕ್ಯಾಂಪಸ್‌ ನಿರ್ದೇಶಕ ಎ. ಯೋಗೀಶ್‌ ಹೆಗ್ಡೆ, ಐಎಂಎ ರಾಜ್ಯಾಧ್ಯಕ್ಷ ಡಾ. ಸುರೇಶ್‌ ಕುಡ್ವ, ನಿಟ್ಟೆ ಗಾಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸಚ್ಚಿದಾನಂದ ಪ್ರಭು ಉಪಸ್ಥಿತರಿರುವರು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ಆಯೋಜಕರು ವಿನಂತಿಸಿದ್ದಾರೆ.
ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ ಅವರ ತಾಯಿ

ಮೂಲತಃ ಕಾರ್ಕಳದವರಾಗಿರುವ ವಿಮಲಾ ಬಾಯಿ ಅವರು ಕರ್ನಾಟಕ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನ ಪ್ರಭಾ ಹೆಗ್ಡೆ IAS (R) ಅವರ ತಾಯಿ.

ಶಿಕ್ಷಣ -ವೈದ್ಯಕೀಯ ಸೇವೆ

ವಿಮಲಾ ಬಾಯಿ ಅವರು ಕಾರ್ಕಳ ಬೋರ್ಡ್‌ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ ಪಡೆದರು. ಎಂಬಿಬಿಎಸ್‌ ಶಿಕ್ಷಣ ಪಡೆಯಲು 1941ರಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜಿಗೆ ಸೇರಿದರು. 1947ರಲ್ಲಿ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿ, 1948ರಲ್ಲಿ ವೈದ್ಯಕೀಯ ವೃತ್ತಿ (ಮದ್ರಾಸ್‌ ರಾಜ್ಯ ಸರಕಾರದಿಂದ) ಪ್ರಾರಂಭಿಸಿದರು. ಪುತ್ತೂರು, ಉಡುಪಿ ಮತ್ತು ಮಂಗಳೂರಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಅವರು 1956ರಲ್ಲಿ ಹೊಸದಾಗಿ ರಚಿಸಲಾದ ಆಂಧ್ರ ಪ್ರದೇಶ ರಾಜ್ಯಕ್ಕೆ ವರ್ಗಾವಣೆಯಾದರು. ಅನಂತರ ಉಸ್ಮಾನಿಯಾ ಜನರಲ್‌ ಆಸ್ಪತ್ರೆಯಲ್ಲಿ ಸಹಾಯಕ ಶಸ್ತ್ರಚಿಕಿತ್ಸಕ ಸಿವಿಲ್ ಸರ್ಜನ್ ಆಗಿ ಕಾರ್ಯನಿರ್ವಹಿಸಿದ್ದರು. ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ಪೂರ್ಣಗೊಳಿಸಿದ ನಂತರ ಗಾಂಧಿ ಜನರಲ್‌ ಆಸ್ಪತ್ರೆಗೆ ಸಿವಿಲ್ ಸರ್ಜನ್ ಆಗಿ ಬಡ್ತಿಗೊಂಡರು. ಅಲ್ಲಿ ಚರ್ಮ ಮತ್ತು ಎಸ್.ಐ.ಡಿ. ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು. ಬಳಿಕ ಎಂಡಿ & ಡಿವಿ ವಿದ್ಯಾರ್ಥಿಗಳಿಗೆ ಪರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. 1978 ರಲ್ಲಿ ಆಂಧ್ರ ಪ್ರದೇಶ ಸರ್ಕಾರದಿಂದ ಪ್ರೊ ಎಮಿರೇಟಸ್ ಆಗಿ ಜವಾಬ್ದಾರಿ ವಹಿಸಿಕೊಂಡರು. 1980ರಲ್ಲಿ ಚರ್ಮ ಮತ್ತು ವೆನೆರಿಯಾಲಜಿ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿದ ಬಳಿಕ ವಿಮಲಾ ಬಾಯಿ ನಿವೃತ್ತಿ ಹೊಂದಿದರು. ನಿವೃತ್ತಿ ಬಳಿಕ ಮಹಾವೀರ ಆಸ್ಪತ್ರೆಯಲ್ಲಿ ಹಾಗೂ ರಾಮಕೃಷ್ಣ ಮಠದಲ್ಲಿ ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸಿ 2015 ಮಾ. 27ರಂದು ಇಹಲೋಕ ತ್ಯಜಿಸಿದರು.





























































































































































































































error: Content is protected !!
Scroll to Top