ಸಿಮೆಂಟ್‌ ಬೆಲೆ ಏರಿಕೆ : ಚೀಲಕ್ಕೆ 20-30 ರೂ.ವರೆಗೂ ದರ ಹೆಚ್ಚಳ ಸಾಧ್ಯತೆ

ಹೊಸದಿಲ್ಲಿ : ಸಿಮೆಂಟ್‌ ದರವನ್ನು ಚೀಲಕ್ಕೆ 20-30 ರೂ.ವರೆಗೂ ಏರಿಕೆ ಮಾಡಲು ಉತ್ಪಾದಕರು ನಿರ್ಧರಿಸಿದ್ದು, ನವೆಂಬರ್‌ ತಿಂಗಳಲ್ಲೇ ಈ ಏರಿಕೆ ಜಾರಿಯಾಗುವ ಸಾಧ್ಯತೆಯಿದೆ. ಸಿಮೆಂಟ್‌ ದರ ಹೆಚ್ಚಳವು ರಿಯಲ್‌ ಎಸ್ಟೇಟ್‌ ಉದ್ಯಮಕ್ಕೂ ಹೊರೆಯಾಗಲಿದ್ದು, ಅಂತಿಮವಾಗಿ, ಫ್ಲ್ಯಾಟ್‌/ಅಪಾರ್ಟ್‌ಮೆಂಟ್‌ಗಳ ಬೆಲೆ ಹೆಚ್ಚಳದ ಮೂಲಕ ಗ್ರಾಹಕರಿಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ.
ಮುಂಗಾರು ಮಳೆಯ ನಿರ್ಗಮನದಲ್ಲಿ ವಿಳಂಬ ಹಾಗೂ ಸೆಪ್ಟೆಂಬರ್‌-ಅಕ್ಟೋಬರ್‌-ನವೆಂಬರ್‌ ತಿಂಗಳಲ್ಲಿ ಹೆಚ್ಚಿನ ಹಬ್ಬದ ಋುತು ರಜೆಗಳಿಂದಾಗಿ ಕಟ್ಟಡ ನಿರ್ಮಾಣ ವಲಯದಲ್ಲಿ ಕೂಲಿಕಾರ್ಮಿಕರ ಕೊರತೆ ಕಾಣಿಸಿಕೊಂಡಿದೆ. ಇದರಿಂದ ನಿರ್ಮಾಣ ಚಟುವಟಿಕೆ ನಿಧಾನವಾಗಿ, ಸಿಮೆಂಟ್‌ ಬೇಡಿಕೆಯಲ್ಲಿ ಇಳಿಕೆಯಾಗಿದೆ. ಈ ನಷ್ಟವನ್ನು ತುಂಬಿಕೊಳ್ಳಲು ಸಿಮೆಂಟ್‌ ತಯಾರಕ ಸಂಸ್ಥೆಗಳು ಪ್ರತಿ ಚೀಲದ ಬೆಲೆಯನ್ನು 30 ರೂ.ವರೆಗೂ ಹೆಚ್ಚಿಸಲು ನಿರ್ಧರಿಸಿವೆ ಎಂದು ಎಂಕೆ ಗ್ಲೋಬಲ್‌ ಸಂಸ್ಥೆ ತಿಳಿಸಿದೆ.
ಹಬ್ಬದ ಋುತು ಮುಗಿದಿರುವುದರಿಂದ ಮುಂದಿನ ತಿಂಗಳಲ್ಲಿ ನಿರ್ಮಾಣ ಕಾಮಗಾರಿ ವೇಗ ಪಡೆಯಲಿದ್ದು, ಸಿಮೆಂಟ್‌ ಬೇಡಿಕೆ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಸಂಸ್ಥೆ ತಿಳಿಸಿದೆ. ಜಾಗತಿಕವಾಗಿ ಸಿಮೆಂಟ್‌ ಕಂಪನಿಗಳಿಗೆ ತಯಾರಿಕಾ ವೆಚ್ಚ ಇಳಿಕೆಯಾಗುತ್ತಿದ್ದರೂ ಬೇಡಿಕೆ ಕುಸಿತ ಕಾರಣವೊಡ್ಡಿ ಬೆಲೆ ಏರಿಕೆಗೆ ಮುಂದಾಗಿವೆ.
2022ರ ಅಕ್ಟೋಬರ್‌ನಲ್ಲೂ ಸಿಮೆಂಟ್‌ ಬೆಲೆ ಏರಿಕೆಯಾಗಿತ್ತು. ಪ್ರತಿ ಚೀಲಕ್ಕೆ 3-4 ರೂ. ಏರಿಕೆ ಮಾಡಲಾಗಿತ್ತು. ಉತ್ತರ ಭಾರತ ಹಾಗೂ ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ಸೆಪ್ಟೆಂಬರ್‌ನಲ್ಲೂ ಗರಿಷ್ಠ 10 ರೂ.ವರೆಗೂ ಬೆಲೆ ಹೆಚ್ಚಳ ಮಾಡಲಾಗಿತ್ತು.





























































error: Content is protected !!
Scroll to Top