ಜೈನ ಸನ್ಯಾಸಿಯಾಗಲಿರುವ ಬಿಜೆಪಿ ನಾಯಕಿ ಉಮಾ ಭಾರತಿ

ನ.17ರಂದು ಕರ್ನಾಟಕದ ಜೈನ ಮುನಿ ಆಚಾರ್ಯ ವಿದ್ಯಾಸಾಗರ ಜೀ ಮಹಾರಾಜ್ ಅವರಿಂದ ಸನ್ಯಾಸ ಸ್ವೀಕಾರ

ಭೋಪಾಲ್: ಒಂದು ಕಾಲದಲ್ಲಿ ಬಿಜೆಪಿಯ ಫಯರ್‌ ಬ್ರ್ಯಾಂಡ್‌ ನಾಯಕಿಯಾಗಿ ಗುರುತಿಸಿಕೊಂಡಿದ್ದ, ಪ್ರಖರ ಹಿಂದುತ್ವವಾದಿ ಉಮಾ ಭಾರತಿಯವರು ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಲು ತೀರ್ಮಾನಿಸಿದ್ದಾರೆ. ಇನ್ನು ಮುಂದೆ ಇಡೀ ವಿಶ್ವವೇ ನನ್ನ ಕುಟುಂಬ, ‘ದೀದಿ ಮಾ ’ ಎಂಬುದಾಗಿ ಗುರುತಿಸಿಕೊಳ್ಳಲಿದ್ದೇನೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಘೋಷಿಸಿದ್ದಾರೆ. ಕುಟುಂಬದೊಂದಿಗಿನ ಎಲ್ಲ ಬಾಂಧವ್ಯವನ್ನು ಕಡಿದುಕೊಂಡಿರುವುದಾಗಿ ಟ್ವಿಟರ್ ಮೂಲಕ ಅವರು ಮಾಹಿತಿ ನೀಡಿದ್ದಾರೆ. ಜೈನ ಸಂತ ಆಚಾರ್ಯ ವಿದ್ಯಾಸಾಗರ್ ಮಹಾರಾಜ್ ಅವರ ಆದೇಶದ ಮೇರೆಗೆ ಬಂಧುಗಳು, ಸಂಬಂಧಿಕರು ಸೇರಿದಂತೆ ಎಲ್ಲ ಕೌಟುಂಬಿಕ ಬಂಧಗಳಿಂದ ಮುಕ್ತವಾಗಿರುವುದಾಗಿ ಅವರು ತಿಳಿಸಿದ್ದಾರೆ. ಉಡುಪಿ ಪೇಜಾವರ ಮಠದ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿಯವರು ಅವರಿಗೆ ಹಿಂದು ಸನ್ಯಾಸ ದೀಕ್ಷೆ ನೀಡಿದ್ದರು. ಹೀಗಾಗಿ ಶ್ರೀಗಳನ್ನು ಉಮಾ ಭಾರತಿ ಗುರು ಸ್ಥಾನದಲ್ಲಿಟ್ಟಿದ್ದರು.
ನ. 17ರಂದು ನಾನು ಮುಕ್ತಳಾಗಲಿದ್ದೇನೆ. ನನ್ನ ಜಗತ್ತು ಮತ್ತು ಕುಟುಂಬದ ವ್ಯಾಪ್ತಿ ವಿಸ್ತಾರಗೊಂಡಿದೆ. ಈಗ ನಾನು ಇಡೀ ವಿಶ್ವ ಸಮುದಾಯಕ್ಕೇ ಸಹೋದರಿ ಮತ್ತು ತಾಯಿಯಾಗಿದ್ದೇನೆ. ನನಗೆ ವೈಯಕ್ತಿಕವಾಗಿ ಕುಟುಂಬ ಎಂಬುದಿಲ್ಲ. ನನ್ನ ಸನ್ಯಾಸ ದೀಕ್ಷೆಯ 30ನೇ ವರ್ಷದಲ್ಲಿ ನಾನು ಅವರ (ದೀಕ್ಷೆ ನೀಡಿದ್ದ ಸಂತರ) ಆದೇಶವನ್ನು ಪಾಲಿಸಲು ಪ್ರಾರಂಭಿಸುತ್ತೇನೆ ಎಂದು ನಾನು ನಿರ್ಧರಿಸಿದ್ದೆ. ಅದರಂತೆ 2022ರ ಮಾರ್ಚ್ 17ರಂದು ಸಾಗರ್ ಜಿಲ್ಲೆಯ ರಹಾಲಿಯಲ್ಲಿ ಎಲ್ಲ ಸಂತರ ಮುಂದೆ ಕೌಟುಂಬಿಕ ಬಾಂಧವ್ಯಗಳಿಂದ ಮುಕ್ತಳಾಗುವ ಬಗ್ಗೆ ನನಗೆ ಅವರು ಆದೇಶವನ್ನು ನೀಡಿದ್ದರು ಎಂದು ಉಮಾ ಭಾರತಿ ಸರಣಿ ಟ್ವೀಟ್​ಗಳಲ್ಲಿ ತಿಳಿಸಿದ್ದಾರೆ. ಕೌಟುಂಬಿಕ ಬಂದಗಳಿಂದ ಮುಕ್ತರಾಗುವ ಬಗ್ಗೆ ಅವರು ಸುಮಾರು 17 ಟ್ವೀಟ್​ಗಳನ್ನು ಮಾಡಿದ್ದಾರೆ.
1992ರ ನವೆಂಬರ್ 17 ರಂದು ಅಮರಕಂಟಕ್‌ನಲ್ಲಿಯೇ ಸನ್ಯಾಸ ದೀಕ್ಷೆಯನ್ನು ತೆಗೆದುಕೊಂಡಿದ್ದರು. ಹೀಗಾಗಿ ಚಂದ್ರಗ್ರಹಣದ ನಂತರ ಅಲ್ಲಿಗೇ ತೆರಳಿ, ಅದೇ ದಿನ ಕೌಟುಂಬಿಕ ಬಾಂಧವ್ಯದಿಂದ ಮುಕ್ತಳಾಗಲಿದ್ದೇನೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದವರಾದ ಜೈನ ಮುನಿ ಆಚಾರ್ಯ ವಿದ್ಯಾಸಾಗರ ಜೀ ಮಹಾರಾಜ್ ಅವರು ಈಗಲೂ ನನಗೆ ಗುರುಗಳು. ಎಲ್ಲ ವೈಯಕ್ತಿಕ ಸಂಬಂಧಗಳು ಮತ್ತು ಬಾಂಧವ್ಯಗಳನ್ನು ತ್ಯಜಿಸಲು ಅವರು ನನಗೆ ಆದೇಶಿಸಿದ್ದಾರೆ. ನನ್ನನ್ನು ‘ದೀದಿ ಮಾ’ ಎಂದೇ ಕರೆಯಬೇಕು. ನನ್ನ ಭಾರತಿ ಹೆಸರನ್ನು ಅರ್ಥಪೂರ್ಣಗೊಳಿಸಲು ಭಾರತದ ಎಲ್ಲಾ ನಾಗರಿಕರು ಇದನ್ನು ಒಪ್ಪಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.





























































error: Content is protected !!
Scroll to Top